ಮಹೇಶ್ ಬಾಬು ಅಭಿನಯದಲ್ಲಿ ಎಸ್.ಎಸ್. ರಾಜಮೌಳಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ ‘ವಾರಣಾಸಿ’ ಎಂಬ ಹೆಸರಿಡಲಾಗಿದ್ದು, ಈ ಚಿತ್ರದ ಟೈಟಲ್ ಟೀಸರ್, ಶನಿವಾರ ರಾತ್ರಿ ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಬಿಡುಗಡೆಯಾಗಿದೆ.
ಇದೊಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ‘ವಾರಣಾಸಿ’ ಚಿತ್ರವನ್ನು ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ ಬಿಝಿನೆಸ್ ಸಂಸ್ಥೆಗಳಡಿ ಕೆ.ಎಲ್. ನಾರಾಯಣ ಮತ್ತು ಎಸ್.ಎಸ್. ಕಾರ್ತಿಕೇಯ ಜೊತೆಯಾಗಿ ನಿರ್ಮಿಸುತ್ತಿದ್ದು, ರಾಜಮೌಳಿ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು, ರುದ್ರ ಎಂಬ ಪಾತ್ರದಲ್ಲಿ ಅಭಿನಯಿಸಿದರೆ, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್, ಮಂದಾಕಿನಿ ಮತ್ತು ಕುಂಭ ಎಂಬ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
‘ವಾರಣಾಸಿ’ ಚಿತ್ರಕ್ಕೆ ರಾಜಮೌಳಿ ತಂದೆ ವಿಜಯಪ್ರಸಾದ್ ಕಥೆ-ಚಿತ್ರಕಥೆ ರಚಿಸಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರವು 2027ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ರಾಜಮೌಳಿ, ತೆಲುಗು ಚಿತ್ರರಂಗಕ್ಕೆ ಪ್ರೀಮಿಯಮ್ ಫುಲ್ ಸ್ಕ್ರೀಮ್ ಐಮ್ಯಾಕ್ಸ್ ಫಾರ್ಮ್ಯಾಟ್ ಎಂಬ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದಾರೆ.
ಇದನ್ನು ಓದಿ: ಆಮೀರ್ ಖಾನ್ ಆಯ್ತು; ‘ಮಹಾಭಾರತ’ದ ಬಗ್ಗೆ ಈಗ ರಾಜಮೌಳಿ ಮಾತು
ಈ ಸಂದರ್ಭದಲ್ಲಿ ಮಾತನಾಡಿದ ರಾಜಮೌಳಿ, ‘ನನಗೆ ಬಾಲ್ಯದಿಂದಲೂ ರಾಮಾಯಣ ಮತ್ತು ಮಹಾಭಾರತವೆಂದರೆ ಬಹಳ ಇಷ್ಟ. ಇದು ನನ್ನ ಡ್ರೀಮ್ ಪ್ರಾಜೆಕ್ಟ್. ರಾಮಾಯಣದ ಒಂದು ಪ್ರಮುಖ ಪ್ರಸಂಗವನ್ನು ಆಧರಿಸಿ ಚಿತ್ರ ಮಾಡುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ರಾಮನಂತಹ ಪ್ರಶಾಂತವಾದ ಪಾತ್ರಕ್ಕೆ ಮಹೇಶ್ ಸೂಟ್ ಆಗುತ್ತಾರಾ ಎಂಬ ಪ್ರಶ್ನೆ ಇತ್ತು. ಮೊದಲ ದಿನ ಮಹೇಶ್ ಬಾಬು ಅವರನ್ನು ರಾಮನ ವೇಷದಲ್ಲಿ ನೋಡಿ ರೋಮಾಂಚನವಾಯಿತು. ಇದುವರೆಗೂ ಸುಮಾರು 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದರು.
ಮಹೇಶ್ ಬಾಬು ಮಾತನಾಡಿ, ‘ನಮ್ಮ ತಂದೆ (ದಿವಂಗತ ನಟ ಕೃಷ್ಣ) ನನಗೆ ಪೌರಾಣಿಕ ಪಾತ್ರದಲ್ಲಿ ನಟಿಸು ಎಂದು ಯಾವಾಗಲೂ ಹೇಳುತ್ತಿದ್ದರು. ಅವರಿದ್ದಾಗ ಅದು ಸಾಧ್ಯವಾಗಿರಲಿಲ್ಲ. ಈಗ ಸಾಧ್ಯವಾಗುತ್ತಿದೆ. ಇದು ನನ್ನ ಡ್ರೀಮ್ ಪ್ರಾಜೆಕ್ಟ್. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವಂತಹ ಒಂದು ಅಪರೂಪದ ಅವಕಾಶ. ಅದಕ್ಕಾಗಿ ಎಷ್ಟು ಬೇಕಾದರೂ ಕಷ್ಟಪಡಲು ನಾನು ಸಿದ್ಧ. ಎಲ್ಲರೂ ಹೆಮ್ಮೆಪಡುವಂತೆ ಕೆಲಸ ಮಾಡುತ್ತೇನೆ. ಈ ಚಿತ್ರ ಬಿಡುಗಡೆಯಾದಾಗ, ಇಡೀ ದೇಶ ನಮ್ಮ ಬಗ್ಗೆ ಹೆಮ್ಮೆಪಡುತ್ತದೆ’ ಎಂದರು.





