ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲಿ ನಟ-ನಿರ್ದೇಶಕ ಉಪೇಂದ್ರ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗಷ್ಟೇ ಕೇಳಿಬಂದಿತ್ತು. ಇದೀಗ ಈ ಚಿತ್ರದಲ್ಲಿ ರಚಿತಾ ರಾಮ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ಬಂದಿದೆ.
ಹೌದು, ‘ಕೂಲಿ’ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ. ಇದರಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದರ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ. ಇತ್ತೀಚೆಗೆ ರಚಿತಾ, ಚೆನ್ನೈಗೆ ಹೋಗಿ ನಿರ್ದೇಶಕ ಲೋಕೇಶ್ ಕನಕರಾಜ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡದಿಂದ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.
ರಚಿತಾ ರಾಮ್, ಕನ್ನಡದಲ್ಲಿ ಒಂದು ಯಶಸ್ಸು ನೋಡದೆ ಕೆಲವು ವರ್ಷಗಳೇ ಆಗಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ ರಚಿತಾ ಅಭಿನಯದ ‘ಮ್ಯಾಟ್ನಿ’, ‘ಬ್ಯಾಡ್ ಮ್ಯಾನರ್ಸ್’, ‘ವೀರಂ’, ‘ಕ್ರಾಂತಿ’, ‘ಏಕ್ ಲವ್ ಯಾ’, ‘ಮಾನ್ಸೂನ್ ರಾಗ’, ‘ಲವ್ ಯೂ ರಚ್ಚು’, ‘ಆಯುಷ್ಮಾನ್ ಭವ’ ಸೇರಿದಂತೆ ಯಾವೊಂದು ಚಿತ್ರ ಸಹ ಯಶಸ್ವಿಯಾಗಿಲ್ಲ. ಸದ್ಯ ರಚಿತಾ, ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ನಟಿಸಿದ್ದು, ಅದರ ಬಿಡುಗಡೆಗೆ ಕಾದಿದ್ದಾರೆ. ಅದು ತಮಗೆ ದೊಡ್ಡ ಬ್ರೇಕ್ ನೀಡಬಹುದು ಎಂಬ ನಿರೀಕ್ಷೆಯಲ್ಲಲಿದ್ದಾರೆ.
ರಚಿತಾ ಈ ಹಿಂದೆ ‘ಸೂಪರ್ ಮಚ್ಚಿ’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಚಿರಂಜೀವಿ ಅವರ ಮಾಜಿ ಅಳಿಯ ಕಲ್ಯಾಣ್ ದೇವ್‍ಗೆ ನಾಯಕಿಯಾಗಿ ನಟಿಸಿದ್ದರು. ಆದರೆ, ಚಿತ್ರ ಸೋತು, ರಚಿತಾ ನಿರೀಕ್ಷೆ ನುಚ್ಚುನೂರಾಯಿತು. ಈಗ ಅವರು ತಮಿಳು ಚಿತ್ರದಲ್ಲಿ, ಅದರಲ್ಲೂ ರಜನಿಕಾಂತ್ ಅಭಿನಯದ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿದೆ.
‘ಕೂಲಿ’ ಚಿತ್ರದಲ್ಲಿ ರಜನಿಕಾಂತ್ ಮತ್ತು ಉಪೇಂದ್ರ ಜೊತೆಗೆ ಶ್ರುತಿ ಹಾಸನ್, ಸತ್ಯರಾಜ್, ಮಹೇಂದ್ರನ್ ಮುಂತಾದವರು ನಟಿಸುತ್ತಿದ್ದಾರೆ. ಲೋಕೇಶ್ ಕನಕರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಸನ್ ಪಿಕ್ಚರ್ಸ್ ಸಂಸ್ಥೆಯು ರಜನಿಕಾಂತ್ ಅವರ ‘ಜೈಲರ್’ ಮತ್ತು ‘ಅಣ್ಣಾತ್ತೆ’ ಚಿತ್ರಗಳನ್ನು ಸಹ ನಿರ್ಮಿಸಿತ್ತು. ಈ ಚಿತ್ರಕ್ಕೆ ಅನಿರ್ಉದ್ಧ್ ರವಿಚಂದರ್ ಸಂಗೀತವಿದೆ.