ಶಿವರಾಜಕುಮಾರ್ ಪುತ್ರಿ ನಿವೇದಿತಾ ಮೊದಲ ಬಾರಿಗೆ ನಿರ್ಮಿಸುತ್ತಿರುವ ‘ಫೈರ್ ಫ್ಲೈ’ ಚಿತ್ರವು ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಣೆಯಾಗಿದೆ. ಈಗಾಗಲೇ ಚಿತ್ರತಂಡವು ಸುಧಾರಾಣಿ, ಅಚ್ಯುತ್ ಕುಮಾರ್ , ಶೀತಲ್ ಶೆಟ್ಟಿ, ಮೂಗು ಸುರೇಶ್ ಮುಂತಾದವರ ಪಾತ್ರಗಳನ್ನು ಪರಿಚಯಿಸಿದೆ. ಆದರೆ, ನಾಯಕಿ ಯಾರು ಎಂಬ ವಿಷಯವು ಇದುವರೆಗೂ ಗೌಪ್ಯವಾಗಿಯೇ ಇತ್ತು. ಈಗ ಈ ಚಿತ್ರದಲ್ಲಿ ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದಾರೆ.
‘ಲವ್ ಮಾಕ್‌ಟೇಲ್’, ‘ಹರಿಕಥೆ ಅಲ್ಲ ಗಿರಿಕಥೆ’, ‘ತ್ರಿಬಲ್ ರೈಡಿಂಗ್’ ಸಿನಿಮಾಗಳಲ್ಲಿ ಬಬ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಚನಾ ಇಂದರ್ ಈ ಚಿತ್ರದಲ್ಲಿ ವಂಶಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ನೇಹಾ ಎಂಬ ಪಾತ್ರದಲ್ಲಿ ರಚನಾ ಬಣ್ಣ ಹಚ್ಚಿದ್ದು, ತಮ್ಮ ಪಾತ್ರದ ಬಗ್ಗೆ ಬಹಳ ಖುಷಿಯಿಂದ ಮಾತನಾಡಿದ್ದಾರೆ.
‘ಸಿನಿಮಾದಲ್ಲಿ ನೇಹಾ ಎಂಬ ಪಾತ್ರ ಮಾಡಿದ್ದೇನೆ. ನೇಹಾ ಬದುಕನ್ನು ತುಂಬಾ ಇಷ್ಟಪಡುತ್ತಾಳೆ. ಎಂಜಾಯ್ ಮಾಡುತ್ತಾಳೆ. ಭವಿಷ್ಯದ ಬಗ್ಗೆ ಯೋಚನೆ ಮಾಡೋದಿಲ್ಲ. ಸಿನಿಮಾವನ್ನು ನಾನು ನೋಡಲು ಕಾತರಳಾಗಿದ್ದಾನೆ. ಚಿತ್ರದ ಒಂದಷ್ಟು ಕ್ಲಿಪ್ಸ್ ನೋಡಿದಾಗ ಮನರಂಜನೆ ನೀಡುವ ಸಿನಿಮಾ ಎನಿಸಿತು. ವಂಶಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ದೀಪಾವಳಿಗೆ ನಮ್ಮ ಚಿತ್ರ ತೆರೆಗೆ ಬರುತ್ತಿದೆ’ ಎಂದಿದ್ದಾರೆ.
‘ಫೈರ್ ಫ್ಲೈ’ ಚಿತ್ರವನ್ನು ವಂಶಿ ಮೊದಲ ಬಾರಿಗೆ ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೆ ನಾಯಕನಾಗಿಯೂ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಮತ್ತು ರಘು ನಿಡುವಳ್ಳಿ ಸಂಭಾಷಣೆ ಇದೆ.
‘ಫೈರ್ ಫ್ಲೈ’ ಚಿತ್ರವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಮೂಲಕ ನಿವೇದಿತಾ ಶಿವರಾಜಕುಮಾರ್ ನಿರ್ಮಿಸುತ್ತಿದ್ದಾರೆ.


