ಜಗತ್ತಿನಲ್ಲಿ ಸಾವಿರಾರು ಆ್ಯಪ್‍ಗಳಿವೆ. ಆದರೆ, ನಟನ ಅಭಿಮಾನಿಗಳಿಗೆಂದೇ ಇದೇ ಮೊದಲ ಬಾರಿಗೆ ಆ್ಯಪ್ ಒಂದನ್ನು ರೂಪಿಸಲಾಗಿದೆ. ಅದೇ ಅಪ್ಪು Fandom ಆ್ಯಪ್. ಈ ಆ್ಯಪ್ ಅನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಅನಾವರಣಗೊಳಿಸಿದ್ದಾರೆ.
ಈ ಆ್ಯಪ್ ಅನ್ನು ಸ್ಟಾರ್ ಫ್ಯಾನ್ಡಮ್ ಆ್ಯಪ್ ಸಂಸ್ಥೆಯು ರೂಪಿಸಿದೆ. ಆ್ಯಪ್ ಅನಾವರಣ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸಮರ್ಥ ರಾಘವ ನಾಗಭೂಷಣಂ, ಅಶ್ವಿನಿ ಪುನೀತ್ ರಾಜಕುಮಾರ್ ಸಹ ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ರಾಮಾಯಣ ಮತ್ತು ಮಹಾಭಾರತಗಳು ಅನೇಕ ವರ್ಷಗಳಿಂದ ನಮ್ಮ ನಡುವೆ ಉಳಿದುಕೊಂಡಿವೆ. ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತವೆ. ಎಐ ತಂತ್ರಜ್ಞಾನದ ಮೂಲಕ ಭೀಮ, ಅರ್ಜುನ, ರಾಮ ಹೀಗೆ ಅನೇಕ ಪಾತ್ರಗಳನ್ನು ನೈಜತೆಗೆ ಹತ್ತಿರವಾದಂತೆ ಚಿತ್ರಿಸಲಾಗುತ್ತಿದೆ. ಅದೇ ರೀತಿ ಈ ಆ್ಯಪ್ನಲ್ಲಿ ಪುನೀತ್ ಅವರನ್ನು ಬಾಲ್ಯದಿಂದ ಇಲ್ಲಿಯವರೆಗೂ ಸೃಷ್ಟಿಸಲಾಗಿದೆ. ಪುನೀತ್ ಅವರು ಕೊನೆಯುಸಿರೆಳೆದ ಸಂದರ್ಭದಲ್ಲಿ ಎಷ್ಟೊಂದು ಅಭಿಮಾನಿಗಳು ಅವರಿಗಾಗಿ ಮಿಡಿದಿದ್ದಾರೆ. ನೂರಾರು ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಕತ್ತಲೆಗೆ ಹೋಗಿರುವ ಅಪ್ಪು, ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ” ಎಂದು ಹೇಳಿದರು.
ಇದನ್ನು ಓದಿ: ಜಾಕಿ ರಿ ರಿಲೀಸ್; ತೆರೆ ಮೇಲೆ ಅಪ್ಪು ನೋಡಿ ಭಾವುಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್
ಇನ್ನು, ಪುನೀತ್ ಅವರನ್ನು ರಾಜಕೀಯಕ್ಕೆ ಸೆಳೆಯುವುದಕ್ಕೆ ಪ್ರಯತ್ನಿಸಿದ್ದಾಗಿ ಹೇಳಿಕೊಂಡ ಡಿ.ಕೆ. ಶಿವಕುಮಾರ್, ‘ಪುನೀತ್ ರಾಜಕುಮಾರ್ ಅವರನ್ನು ರಾಜಕಾರಣಕ್ಕೆ ಸೆಳೆಯಲು ನಾನು ಚಾಕಲೇಟ್ ಕೊಟ್ಟೆ. ಆದರೆ, ಅವರು ಒಪ್ಪಿಕೊಳ್ಳಲಿಲ್ಲ. ಅಶ್ವಿನಿ ಅವರನ್ನೂ ಸಹ ಆಹ್ವಾನಿಸಿದೆ. ಅವರೂ ಸಹ ತಮ್ಮ ಪತಿ ಹಾದಿಯಲ್ಲೇ ನಡೆಯುವುದಾಗಿ ತಿಳಿಸಿದರು. ರಾಜಕಾರಣಕ್ಕೆ ಬರಲಿಲ್ಲ’ ಎಂದು ಹೇಳಿದರು.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ‘ಅಪ್ಪು ಯಾವಾಗಲೂ ಹೊಸತನದ ಕಡೆಗೆ ಹುಡುಕಾಟ ನಡೆಸುತ್ತಿದ್ದರು. ಹೊಸತನದ ಹುಡುಕಾಟದಿಂದಲೇ ಹೊಸಬರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಕೂಡ ಶುರುವಾಗಿದ್ದು. ಚಿತ್ರರಂಗಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂದು ಹೇಳುತ್ತಿದ್ದರು. ಸಮರ್ಥ್ ಅವರ ಟೀಂ ಒಂದು ಐಡಿಯಾ ತೆಗೆದುಕೊಂಡು ಬಂದಿದ್ದರು. ಅದನ್ನು ಸಾಕಷ್ಟು ಡೆವೆಲೆಪ್ ಮಾಡಿ ಈ ಆ್ಯಪ್ ಮಾಡಲಾಗಿದೆ. ಇದರಲ್ಲಿ ಬರೀ ಪುನೀತ್ ಅವರ ಸಿನಿಮಾ ಕುರಿತಾಗಿಯಷ್ಟೇ ಅಲ್ಲ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು, ಸಿನಿಮಾ ಸುದ್ದಿಗಳು ಇರಲಿವೆ’ ಎಂದರು.
ಡಾ.ಸಮರ್ಥ ರಾಘವ ನಾಗಭೂಷಣಂ ಮಾತನಾಡಿ, ‘Fandom ಆ್ಯಪ್ ಮಾಡಬೇಕು ಎಂದು ಯೋಚನೆ ಬಂದಾಗ ಮೊದಲು ಹಾಗೂ ಕೊನೆಯ ಹೆಸರು ಅಂದರೆ ಅದು ಪುನೀತ್ ಅವರದ್ದು. ಕನ್ನಡದ ಪ್ರತಿ ಹೃದಯವನ್ನು ಅವರು ಮುಟ್ಟಿದ್ದಾರೆ. ಅವರ ವ್ಯಕ್ತಿತ್ವವನ್ನು ಮುಂದೆ ಹೇಗೆ ತೆಗೆದುಕೊಂಡು ಹೋಗುತ್ತೇವೆ ಅನ್ನೋದನ್ನು ಆ್ಯಪ್‍ನಲ್ಲಿ ನೋಡಬಹುದು’ ಎಂದರು.





