ಬೆಂಗಳೂರು: ಚಿತ್ರದರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಆತನ ಸಹಚರರನ್ನು ಪೊಲೀಸರು ಈಗಾಗಲೇ ಬಂದಿಸಿದ್ದಾರೆ. ಈ ಪ್ರಕರಣ ಪ್ರತಿನಿತ್ಯ ಒಂದಿಲ್ಲೊಂದು ತಿರುವು ಪಡೆದುಕೊಳ್ಳುತ್ತಿದೆ.
ಜೂನ್.8 ರ ಶನಿವಾರದಂದು ರೇಣುಕಾಸ್ವಾಮಿ ಹತ್ಯೆ ದಿನ ನಟ ದರ್ಶನ್ ಸೇರಿದಂತೆ ಆತನ ಸಹಚರರು ಪಾರ್ಟಿ ಮಾಡಿದ್ದರು ಎನ್ನಲಾದ ಆರ್‌ಆರ್ ನಗರದ ಸ್ಟೋನಿ ಬ್ರೂಕ್ ಪಬ್‌ನಲ್ಲಿಂದು ಸ್ಥಳ ಮಹಜರು ನಡೆಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿ ಅಲ್ಲಿಂದ ಠಾಣೆಗೆ ಕರೆದೊಯ್ದರು.
ಅನ್ನಪೂರ್ಣೇಶ್ವರಿ ಠಾಣಾ ಪೊಲೀಸರು, ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಿದರು. ನಟ ದರ್ಶನ್, ಉದ್ಯಮಿ ವಿನಯ್, ಪ್ರದೂಶ್, ಪವನ್ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಿದರು.
ಈ ಪಾರ್ಟಿಯಲ್ಲಿ ಕನ್ನಡದ ಖ್ಯಾತ ಹಾಸ್ಯನಟ ಚಿಕ್ಕಣ್ಣ ಅವರು ಕೂಡಾ ಭಾಗಿಯಾಗಿದ್ದರು ಎನ್ನಲಾಗಿದ್ದು, ದರ್ಶನ್ ಜತೆಯಲ್ಲಿ ಚಿಕ್ಕಣ್ಣ ಕರೆತಂದು ಸ್ಥಳ ಮಹಜರು ಮಾಡಿದರು.
ಇತ್ತ ದರ್ಶನ್ ಅವರನ್ನು ಕರೆತಂದು ಸ್ಥಳ ಮಹಜರು ಮಾಡುವ ಮೊದಲೇ ಚಿಕ್ಕಣ್ಣ ಅವರನ್ನು ಕರೆತಂದು ಸ್ಥಳ ಮಹಜರು ಮಾಡಿದ್ದಾರೆ ಎನ್ನಲಾಗಿದೆ. ಪಬ್‌ನ ಮೂಲ ಮೂಲೆಗಳನ್ನು ಹುಡುಕಿ ಜಾಲಾಡುವ ಮೂಲಕ ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಇನ್ನು ದರ್ಶನ್ ಮತ್ತು ಗ್ಯಾಂಗ್ ಸ್ಥಳ ಮಹಜರಿಗೆ ಆಗಮಿಸುವ ವೇಳೆ ಕೆಂಗೇರಿ ಹಾಗೂ ಆರ್‌ಆರ್ ನಗರ ಪೊಲೀಸರು ಪಬ್ ಸುತ್ತಲೂ ಬಿಗಿಭದ್ರತೆ ಒದಗಿಸಿದ್ದರು.





