ಶ್ರೇಯಸ್ ಮಂಜು ಅಭಿನಯದ ಮೂರನೆಯ ಚಿತ್ರ ‘ವಿಷ್ಣು ಪ್ರಿಯಾ’ ಕೊನೆಗೂ ಬಿಡುಗಡೆಯಾಗುತ್ತಿದೆ. ಕಳೆದ ದಶಕದ ಕೊನೆಯಲ್ಲಿ ಪ್ರಾರಂಭವಾದ ಈ ಚಿತ್ರ, ಕುಂಟುತ್ತಾ ಸಾಗಿ ಈಗ ಕೊನೆಗೂ ಫೆ. 21ರಂದು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.
ಅದಕ್ಕೂ ಮೊದಲು, ಇತ್ತೀಚೆಗೆ ಈ ಚಿತ್ರದ ‘ಏಳು ಗಿರಿಗಳ ಏಳು ಕಡಲಿನ …’ ಎಂಬ ಪ್ರೇಮಗೀತೆ ಬಿಡುಗಡೆ ಮಾಡಲಾಗಿದೆ.. ಈ ಕಾರ್ಯಕ್ರಮದಲ್ಲಿ ಶ್ರೀಮುರುಳಿ, ಸಪ್ತಮಿ ಗೌಡ, ನಿರ್ಮಾಪಕ ರಮೇಶ್ ರೆಡ್ಡಿ, ಗೀತ ಸಾಹಿತಿ ಕವಿರಾಜ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರಕ್ಕೆ ಶುಭ ಹಾರೈಸಿದರು.
‘ವಿಷ್ಣು ಪ್ರಿಯಾ’ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ವಿ.ಕೆ. ಪ್ರಕಾಶ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕನ್ನಡದಲ್ಲಿ ‘ಐದೊಂದ್ಲ ಐದು’ ಚಿತ್ರವನ್ನು ನಿರ್ದೇಶಿಸಿದ್ದ ಪ್ರಕಾಶ್ ಅವರಿಗೆ ‘ವಿಷ್ಣು ಪ್ರಿಯಾ’ ಎರಡನೇ ಚಿತ್ರ.
ಶ್ರೇಯಸ್ ಮಂಜು ಮಾತನಾಡಿ, ‘ನನಗೆ ಹಣ ಮುಖ್ಯವಲ್ಲ, ಕಲೆ ಮುಖ್ಯ. ಹಣ ಮುಖ್ಯವಾಗಿದ್ದರೆ ಪಬ್ ಮಾಡಿಕೊಂಡು ಹಣ ಮಾಡಿಕೊಂಡಿರುತ್ತಿದೆ. ಕಷ್ಟಪಟ್ಟು ಬೆಳೆದು ಮುಂದೆ ಬರಬೇಕು ಎನ್ನುವ ಆಸೆಯಿಂದ ಈ ಕ್ಷೇತ್ರಕ್ಕೆ ಬಂದೆ. ಮನೆಯಲ್ಲಿ ನಾನು ನಿರ್ಮಾಪಕ ಕೆ. ಮಂಜು ಅಪ್ಪ-ಮಗ. ಆದರೆ, ಮನೆಯಾಚೆ ಅವರೊಬ್ಬ ಪಕ್ಕಾ ವ್ಯವಹಾರಸ್ಥ. ಎಲ್ಲವನ್ನೂ ಅಳೆದು-ತೂಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆ ಕಾರಣಕ್ಕಾಗಿಯೇ ಚಿತ್ರ ವಿಳಂಬವಾಯಿತು’ ಎಂದು ಹೇಳಿದರು.
ನಟಿ ಪ್ರಿಯಾ ವಾರಿಯರ್ ಮಾತನಾಡಿ, ‘ಇದು ಕನ್ನಡದಲ್ಲಿ ಮೊದಲ ಚಿತ್ರ, ಆರಂಭದಲ್ಲಿ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದೆ. ಒಂದಷ್ಟು ವರ್ಷ ಗ್ಯಾಪ್ ಆಗಿರುವುದರಿಂದ, ಕನ್ನಡ ಮರೆತು ಹೋಗಿದೆ. ಮುಂದಿನ ದಿನಗಳಲ್ಲಿ ಖಂಡಿತಾ ಕನ್ನಡದಲ್ಲಿ ಮಾತನಾಡುತ್ತೇನೆ. ‘ವಿಷ್ಣು ಪ್ರಿಯಾ’ದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ನಟ ಶ್ರೇಯಸ್ ಜೊತೆ ಸಾಕಷ್ಟು ಕಲಿತಿದ್ದೇನೆ’ ಎಂದರು.
ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕನ ಜೀವನದಲ್ಲಿ ಏನೇನೆಲ್ಲಾ ನಡೆಯುತ್ತದೆ ಎಂದು ಹೇಳುವ ‘ವಿಷ್ಣು ಪ್ರಿಯಾ’ ಚಿತ್ರದಲ್ಲಿ ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಗೋಪಿಸುಂದರ್ ಸಂಗೀತ ಈ ಚಿತ್ರಕ್ಕಿದೆ.