ಕನ್ನಡದ ಜನಪ್ರಿಯ ನಿರ್ದೇಶಕ ಓಂ ಪ್ರಕಾಶ್ ರಾವ್, ಕಳೆದ ವರ್ಷ ‘ಫೀನಿಕ್ಸ್’ ಎಂಬ ಹೊಸ ಚಿತ್ರದ ಮುಹೂರ್ತ ಮಾಡಿದ್ದರು. ಆ ಚಿತ್ರದ ಚಿತ್ರೀಕರಣ ಮುಗಿಯುವುದರೊಳಗೆ, ಅವರು ಇನ್ನೂ ಒಂದು ಹೊಸ ಚಿತ್ರಕ್ಕೆ ಕಥೆ ಹಾಕಿದ್ದಾರೆ. ವಿಶೇಷವೆಂದರೆ, ಇದು ಅವರ ನಿರ್ದೇಶನದ 50ನೇ ಚಿತ್ರ.
ಈ ಹಿಂದೆ ‘ಮಂಡ್ಯ ಸ್ಟಾರ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿ, ‘ಮಂಡ್ಯ ಸ್ಟಾರ್’ ಎಂದೇ ಜನಪ್ರಿಯರಾಗಿರುವ ಲೋಕೇಶ್ ಅಲಿಯಾಸ್ ಲೋಕಿ, ಓಂಪ್ರಕಾಶ್ ರಾವ್ ಅವರ 50ನೇ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಯುಗಾದಿ ಹಬ್ಬದ ದಿನದಂದು ಈ ಚಿತ್ರದ ಪೋಸ್ಟರ್ ಅಧಿಕೃತವಾಗಿ ಬಿಡುಗಡೆ ಆಗಿದ್ದು, ಚಿತ್ರೀಕರಣ ಜೂನ್ ತಿಂಗಳಿನಿಂದ ಪ್ರಾರಂಭವಾಗಲಿದೆ.
ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರದ ಹೆಸರು ‘ಗೆರಿಲ್ಲಾ ವಾರ್’. ಇದು ಐತಿಹಾಸಿಕ ಚಿತ್ರವಲ್ಲ ಎನ್ನುವ ಓಂಪ್ರಕಾಶ್ ರಾವ್, ‘’ಗೆರಿಲ್ಲಾ WAR’ ಒಂದು ರೀತಿಯ ಯುದ್ಧವಾಗಿದ್ದು, ಅಲ್ಲಿ ಒಂದು ಸಣ್ಣ ಗುಂಪು ದೊಡ್ಡ ಸಂಖ್ಯೆಯ ಶತ್ರುಗಳೊಂದಿಗೆ ವ್ಯವಹರಿಸುವಾಗ ಅಸಾಂಪ್ರದಾಯಿಕ ತಂತ್ರಗಳನ್ನು ಬಳಸುತ್ತದೆ. ಈ ವಿಷಯವನ್ನಿಟ್ಟುಕೊಂಡು ಈಗಿನ ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಓಂಪ್ರಕಾಶ್ ರಾವ್ ಹೇಳಿದ್ದಾರೆ.
‘ಗೆರಿಲ್ಲಾ ವಾರ್’ ಚಿತ್ರದಲ್ಲಿ ಲೋಕಿ ಜೊತೆಗೆ ಅಚ್ಯುತ್ ಕುಮಾರ್, ರಂಗಾಯಣ ರಘು, ಸ್ವಸ್ತಿಕ್ ಶಂಕರ್, ಸುಧಾ ಬೆಳವಾಡಿ, ಚಿತ್ರಾ ಶೆಣೈ, ಪೂಜಾ ಗೌಡ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಗಂಗಮ್ಮ ಎಂಟರ್ಪ್ರೈಸಸ್ ಲಾಂಛನದಲ್ಲಿ ರಮೇಶ್ ಅಬ್ಬನಕುಪ್ಪೆ (ಬಿಡದಿ) ಹಾಗೂ ಸ್ನೇಹಿತರು ನಿರ್ಮಿಸುತ್ತಿದ್ದಾರೆ.
ಓಂಪ್ರಕಾಶ್ ರಾವ್ ಅವರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ದೀಪು ಪಿ.ಆರ್ ಸಂಭಾಷಣೆ, ರವಿಕುಮಾರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ.





