ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್’ ಚಿತ್ರದ ಚಿತ್ರೀಕರಣ ಮುಗಿದು, ಬಿಡುಗಡೆಯ ಹಂತಕ್ಕೆ ಬಂದಿದೆ. ಕಳೆದ ಮೂರು ವರ್ಷಗಳಿಂದ ಚಿತ್ರೀಕರಣವಾಗುತ್ತಲೇ ಇರುವ ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಈ ಸಮಾರಂಭದಲ್ಲಿ ಪ್ರೇಮ್ ಒಬ್ಬ ಅತೃಪ್ತ ಆತ್ಮ ಎಂದು ಧ್ರುವ ಸರ್ಜಾ ಬಣ್ಣಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕನ್ನಡದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಧ್ರುವ, ‘ಅಷ್ಟೊಂದು ಜನ ದೊಡ್ಡ ಕಲಾವಿದರ ಜೊತೆಗೆ ಕೆಲಸ ಮಾಡುವ ಅವಜಾಶ ಕೊಟ್ಟ ಕೆ.ವಿ.ಎನ್ ಸಂಸ್ಥೆಗೆ ಧನ್ಯವಾದ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಅವರಿಂದ ತುಂಬಾ ಕಲಿತಿದ್ದೇನೆ. ನಮ್ಮ ಸಿನಿಮಾದ ನಿಜವಾದ ಹೀರೋ ಅಂದರೆ ಅದು ನಿರ್ದೇಶಕ ಪ್ರೇಮ್. ಅವರದು ಒಂಥರಾ ಅತೃಪ್ತ ಆತ್ಮ. ಎಷ್ಟು ಕೆಲಸ ಮಾಡಿದರೂ ಅವರಿಗೆ ತೃಪ್ತಿ ಆಗಲ್ಲ. ಇನ್ನೂ ಒಂದು ಟೇಕ್ ಕೇಳುತ್ತಲೇ ಇರುತ್ತಾರೆ’ ಎಂದರು.
ನಿರ್ದೇಶಕ ಪ್ರೇಮ್ ಮಾತನಾಡಿ, ‘ಕೆವಿಎನ್ ಸಂಸ್ಥೆ ಚಿತ್ರದ ಅದ್ದೂರಿತನದ ವಿಷಯದಲ್ಲಿ ಯಾವುದಕ್ಕೂ ಕೊರತೆ ಮಾಡಿಲ್ಲ. ನಿರ್ಮಾಪಕರೇ ನಮ್ಮ ಚಿತ್ರದ ನಿಜವಾದ ಹೀರೋ. ಅವರ ಸಿನಿಮಾ ಪ್ರೀತಿಗೆ ಧನ್ಯವಾದ. ಇದು 1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ. ಕೆಡಿ ಅಂದ್ರೆ ಕಾಳಿದಾಸ ಎಂದರ್ಥ. ಆತ ಎಷ್ಟು ಮುಗ್ಧನೋ, ಅಷ್ಟೇ ರಾ ಆಗಿರುತ್ತಾನೆ. ಚಿತ್ರಕ್ಕೆ ಒಟ್ಟು 160 ರಿಂದ 180 ದಿನಗಳವರೆಗೆ ಶೂಟಿಂಗ್ ಮಾಡಿದ್ದೇವೆ. ಚಿತ್ರಕ್ಕೆ ಸಾಕಷ್ಟು ಕೆಲಸವಿದ್ದುದರಿಂದ ನಿಧಾನವಾಗಿದೆ ಎಂದನಿಸಬಹುದು. ಆದರೆ, ಅಷ್ಟೇನೂ ತಡವಾಗಿಲ್ಲ. ಚಿತ್ರವು ಇನ್ನು ಮೂರು ತಿಂಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ಹೇಳಿದರು.
‘ಕೆಡಿ – ದಿ ಡೆವಿಲ್’ ಚಿತ್ರದ ಸಮಾರಂಭದಲ್ಲಿ ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಮುಂತಾದವರು ಹಾಜರಿದ್ದರು. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತವಿದೆ.





