ಪ್ರಣಾಮ್ ಅಭಿನಯದ ‘S/O ಮುತ್ತಣ್ಣ’ ಚಿತ್ರವು ಆಗಸ್ಟ್ 22ರಂದು ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಘೋಷಣೆಯಾಗಿತ್ತು. ಇದೀಗ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ.
ಹೌದು, ಈ ಶುಕ್ರವಾರ ಬಿಡುಗಡೆ ಆಗಬೇಕಿದ್ದ ಪ್ರಣಮ್ ದೇವರಾಜ್ ಅಭಿನಯದ ‘S/O ಮುತ್ತಣ್ಣ’ ಚಿತ್ರವು ಸೆಪ್ಟೆಂಬರ್.12ಕ್ಕೆ ಮುಂದೂಲ್ಪಟ್ಟಿದೆ. ಕನ್ನಡ, ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಇನ್ನು, ಆಗಸ್ಟ್.22ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ‘S/O ಮುತ್ತಣ್ಣ’ ಚಿತ್ರಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಶ್ರೀಕಾಂತ್ ಹುಣಸೂರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಗಿರಿ ಶಿವಣ್ಣ, ತಬಲಾ ನಾಣಿ, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದಾರೆ.
‘S/O ಮುತ್ತಣ್ಣ’ ಹೆಸರೇ ಹೇಳುವಂತೆ ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರ. ಈ ಚಿತ್ರದಲ್ಲಿ ಮುತ್ತಣ್ಣ, ಶಿವು ಎಂಬ ತಂದೆ-ಮಗನಾಗಿ ರಂಗಾಯಣ ರಘು ಹಾಗೂ ಪ್ರಣಮ್ ದೇವರಾಜ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಕ್ಷಿ ಎಂಬ ಪಾತ್ರದಲ್ಲಿ ಖುಷಿ ರವಿ ನಟಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಕಾಶಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.
ಮನೆಯಲ್ಲಿ ಅಪ್ಪನ ಜೊತೆಗೆ ಹೇಗಿರುತ್ತೀನೋ, ಅದೇ ರೀತಿ ರಘು ಅವರ ಜೊತೆಗೂ ಇದ್ದೇನೆ ಎನ್ನುವ ಪ್ರಣಮ್, ‘ಈ ಚಿತ್ರದಲ್ಲಿ ನಟಿಸಿದ್ದಕ್ಕೆ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ. ಮನೆಯಲ್ಲಿ ಅಪ್ಪನ ಜೊತೆಗೆ ಇರುವ ಹಾಗೆಯೇ ಇದ್ದೇನೆ. ಇದೊಂದು ತಂದೆ-ಮಗನ ಬಾಂಧವ್ಯದ ಚಿತ್ರ. ಜೊತೆಗೆ ಪ್ರೇಮ ಕಥಾನಕವೂ ಹೌದು. ಈ ಚಿತ್ರದ ವಿಶೇಷವೆಂದರೆ ಇದರಲ್ಲಿ ಸಾಹಸ ಸನ್ನಿವೇಶಗಳಿಲ್ಲ’ ಎನ್ನುತ್ತಾರೆ.





