ಉಪೇಂದ್ರ ಅಭಿನಯದ ‘UI’ ಚಿತ್ರದ ವಾರ್ನರ್ ಹೆಸರಿನ ತುಣುಕು ಬಿಡುಗಡೆಯಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ, ಈ ವಾರ್ನರ್‍ನಿಂದ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ. ವಾರ್ನರ್ ಏನೋ ಆಯ್ತು, ಚಿತ್ರದ ಟ್ರೇಲರ್ ಯಾವಾಗ ಎಂಬ ಪ್ರಶ್ನೆಗೆ, ಇನ್ನೊಂದು ತುಣುಕನ್ನೂ ತೋರಿಸುವುದಿಲ್ಲ, ಇನ್ನೇನಿದ್ದರೂ ಚಿತ್ರದಲ್ಲೇ ನೋಡಿ ಎನ್ನುತ್ತಾರೆ ಉಪೇಂದ್ರ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನಗೆ ಚಿತ್ರ ಬಿಡುಗಡೆಗೂ ಮೊದಲು ಚಿತ್ರದ ಯಾವ ದೃಶ್ಯವನ್ನೂ ತೋರಿಸುವುದಕ್ಕೂ ಇಷ್ಟವಿಲ್ಲ. ಆದರೆ, ಟ್ರೇಲರ್ ಮತ್ತು ಟೀಸರ್ ಬಿಡುಗಡೆ ಮಾಡುವುದು ಟ್ರೆಂಡ್ ಆಗಿದೆ. ಅದು ಸರಿಯೋ, ತಪ್ಪೋ ಗೊತ್ತಿಲ್ಲ. ಪ್ರೇಕ್ಷಕರಿಗೆ ಚಿತ್ರವನ್ನು ಮುಟ್ಟಿಸುವ ನಿಟ್ಟಿನಲ್ಲಿ ಅದು ಅಗತ್ಯವಿರಬಹುದು. ವೈಯಕ್ತಿಕವಾಗಿ ನನಗೆ ಅದು ಇಷ್ಟವಿಲ್ಲ. ನಿರ್ದೇಶಕನಾಗಿ, ಮುಂದಿನ ಚಿತ್ರದಲ್ಲಿ ಒಂದು ಸಣ್ಣ ತುಣುಕು ಸಹ ತೋರಿಸದೆ, ಹಿಟ್ ಮಾಡಿ ತೋರಿಸಬೇಕು ಎಂಬುದು ನನ್ನಾಸೆ. ಇಲ್ಲಿ ಹಲವು ವಿಷಯಗಳನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಕೆಲವು ವಿಷಯಗಳನ್ನು ಮಾತ್ರ ತೋರಿಸಿದ್ದೇವೆ. ಇನ್ನೇನೂ ತೋರಿಸುವುದಿಲ್ಲ. ಎಲ್ಲವನ್ನೂ ಸಿನಿಮಾದಲ್ಲೇ ನೋಡಿ’ ಎಂದರು.
‘UI’ ಚಿತ್ರದ ಮೂಲಕ ಹಲವು ವಿಷಯಗಳನ್ನು ಸಾಂಕೇತಿಕವಾಗಿ ಹೇಳಿರುವುದಾಗಿ ಹೇಳುವ ಅವರು, ‘ಚಿತ್ರದಲ್ಲೊಂದು ಕಥೆ ಹೇಳಿದ್ದೇನೆ. ಅದರ ಹಿಂದೆ ಇನ್ನೇನೋ ಇದೆ. ಇಲ್ಲಿ ಹಲವು ವಿಷಯಗಳನ್ನು ಸಾಂಕೇತಿಕವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇಡೀ ಚಿತ್ರದಲ್ಲಿ ರೂಪಕಗಳು ಜಾಸ್ತಿ ಇರುತ್ತವೆ. ಇದೊಂದು ಪಕ್ಕಾ ಮನರಂಜನೆಯ ಸಿನಿಮಾ. ಅದರ ಹಿಂದಿನ ವಿಷಯಗಳನ್ನು ಎಷ್ಟು ಜನರಿಗೆ ಅರ್ಥವಾಗುತ್ತದೆ ಎಂದು ನಾನೂ ಕುತೂಹಲದಿಂದ ಕಾಯುತ್ತಿದ್ದೇನೆ. ಜನರಿಗೆ ಅರ್ಥವಾಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದರು.
‘UI’ ಡಿ. 20ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಉಪೇಂದ್ರ ಅವರೇ ಹೊತ್ತಿದ್ದು, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಧು ಕೋಕಿಲ, ಅಚ್ಯುತ್ ಕುಮಾರ್, ರೀಷ್ಮಾ ನಾಣಯ್ಯ, ರವಿಶಂಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‍ಟೈನರ್ಸ್ ಸಂಸ್ಥೆಗಳಡಿ ಜಿ. ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.