ಧರ್ಮ ಅಭಿನಯದ ‘ನೈಸ್ ರೋಡ್’ ಎಂಬ ಚಿತ್ರ ತಯಾರಾಗಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿರುವ ವಿಷಯ ಗೊತ್ತಿರಬಹುದು. ಚಿತ್ರತಂಡದವರು ಪ್ರಚಾರ ಶುರು ಮಾಡುತ್ತಿದ್ದಂತೆಯೇ, ನೈಸ್ ರೋಡ್ ಸಂಸ್ಥೆಯವರಿಂದ ಹೆಸರು ಬದಲಿಸುವುದಕ್ಕೆ ನೋಟೀಸ್ ಬಂದಿತ್ತು. ಬೇರೆ ದಾರಿ ಇಲ್ಲದೆ ಇದೀಗ ಚಿತ್ರಕ್ಕೆ ‘ನೈಟ್ ರೋಡ್’ ಎಂದು ಮರುನಾಮಕರಣ ಮಾಡುವುದರ ಜೊತೆಗೆ ಚಿತ್ರವನ್ನು ಇದೇ ಸೆ. 27ರಂದು ರಾಜ್ಯಾದ್ಯಂತ ಬಿಡುಗಡೆಗೆ ಮಾಡಲಾಗುತ್ತಿದೆ.
‘ನೈಟ್ ರೋಡ್’ ಚಿತ್ರದಲ್ಲಿ ಧರ್ಮ, ಗಿರಿಜಾ ಲೋಕೇಶ್, ಮಂಜು ರಂಗಾಯಣ, ಗೋವಿಂದೇ ಗೌಡ, ರವಿಕಿಶೋರ್, ಸಚ್ಚಿ, ಸುರೇಖ, ಮಂಜು ಕ್ರಿಶ್, ಪ್ರಭು ರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸತೀಶ್ ಆರ್ಯನ್ ಸಂಗೀತ ಮತ್ತು ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರವನ್ನು ಗೋಪಾಲ್ ಹಳೆಪಾಳ್ಯ ನಿರ್ಮಿಸಿ-ನಿರ್ದೇಶನ ಮಾಡಿದ್ದಾರೆ.
‘ನೈಟ್ ರೋಡ್’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ರಸ್ತೆಯಲ್ಲಾಗುವ ಒಂದಿಷ್ಟು ವಿಚಿತ್ರ ಘಟನೆಗಳ ಸುತ್ತ ಸುತ್ತುತ್ತದೆ. ‘ನೈಸ್ ರೋಡ್’ ಎಂಬುದು ಒಂದು ಬ್ರಾಂಡ್ ಹೆಸರು. ಹಾಗಿರುವಾಗ, ಅವರ ಅನುಮತಿ ಪಡೆದು ಶೀರ್ಷಿಕೆ ದಾಖಲಿಸಿದ್ದೀರಾ ಎಂಬ ಪ್ರಶ್ನೆಗೆ, ನೈಸ್ ರಸ್ತೆಗೂ ತಮ್ಮ ಚಿತ್ರಕ್ಕೂ ಸಂಬಂಧವಿಲ್ಲ ಎಂದು ನಿರ್ದೇಶಕರು ಹೇಳಿದ್ದರು.
ಈ ಕುರಿತು ಮಾತನಾಡಿದ್ದ ನಿರ್ದೇಶಕ ಗೋಪಾಲ್ ಹಳೆಪಾಳ್ಯ, ‘ಇದೊಂದು ಕಾಲ್ಪನಿಕ ಕಥೆ. ನೈಸ್ ರೋಡ್‍ಗೂ ನಮ್ಮ ಸಿನಿಮಾಗೂ ಸಂಬಂಧವಿಲ್ಲ. ಹಳ್ಳಿಯ ಮುಂದೆ ಹೈವೇ ರಸ್ತೆಯಿರುತ್ತದೆ. ಆ ರಸ್ತೆ ಎಷ್ಟು ನೈಸಾಗಿದೆ ಅಂತ ಊರ ಜನ ಹೇಳುತ್ತಿರುತ್ತಾರೆ. ಅದನ್ನೇ ಚಿತ್ರದ ಟೈಟಲ್ ಆಗಿಟ್ಟಿದ್ದೇವೆ’ ಎಂದು ಹೇಳಿದ್ದರು. ಈಗ ಸಂಸ್ಥೆಯಿಂದ ನೋಟೀಸ್ ಬಂದ ಹಿನ್ನೆಲೆಯಲ್ಲಿ ಹೆಸರನ್ನು ಬದಲಾಯಿಸಲಾಗಿದೆ.
ಇದುವರೆಗೂ 85 ಚಿತ್ರಗಳಲ್ಲಿ ಪೊಲೀಸ್ ಆಗಿ ಕಾಣಿಸಿಕೊಂಡಿರುವ ಧರ್ಮ, ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ 86ನೇ ಚಿತ್ರ ಇದು. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಇಲ್ಲಿ ನಾನು ಹೀರೋ ಎನ್ನುವುದಕ್ಕಿಂತ ಕಥೆಯೇ ಹೀರೋ. ಕರ್ಮದ ಬಗ್ಗೆ ಕಥೆ ಹೇಳಲಾಗಿದೆ. ಈ ಜನ್ಮದಲ್ಲಿ ಮಾಡಿದ ಪಾಪಕ್ಕೆ, ಈ ಜನ್ಮದಲ್ಲೇ ಶಿಕ್ಷೆ ಸಿಗಬೇಕು, ಮುಂದಿನ ಜನ್ಮಕ್ಕೆ ಯಾಕೆ ಮುಂದೂಡಲಾಗುತ್ತದೆ ಎಂಬ ಸೂಕ್ಷ್ಮವನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ’ ಎನ್ನುತ್ತಾರೆ.



