ಕನ್ನಡದ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಪ್ರಮುಖವಾದ ಚಿತ್ರವೆಂದರೆ ಅದು ಮಂಸೋರೆ ನಿರ್ದೇಶನದ ‘ನಾತಿಚರಾಮಿ’. ಈ ಚಿತ್ರದಲ್ಲಿ ಶ್ರುತಿ ಹರಿಹರನ್ ನಿರ್ವಹಿಸಿದ ಗೌರಿ ಪಾತ್ರ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಈ ಪಾತ್ರವನ್ನು ಪುನಃ ಇನ್ನೊಂದು ಚಿತ್ರದಲ್ಲಿ ವಾಪಸ್ಸು ಕರೆದುಕೊಂಡು ಬಂದಿದ್ದಾರೆ ಮಂಸೋರೆ.
ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಚಿತ್ರವು ಜುಲೈ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಮಿಕ್ಕಂತೆ ಉಳಿದ ತಾರಾಬಳಗವನ್ನು ಮಂಸೋರೆ ಬಹಿರಂಗಪಡಿಸಿರಲಿಲ್ಲ. ಈಗ ಅವರು ಗೌರಿ ಪಾತ್ರವನ್ನು ಪರಿಚಯಿಸಿದ್ದಾರೆ.
‘ದೂರ ತೀರ ಯಾನ’ ಚಿತ್ರದಲ್ಲಿ ಮಂಸೋರೆ, ಗೌರಿ ಪಾತ್ರವನ್ನು ಮುಂದುವರೆಸಿದ್ದಾರೆ. ನಿರ್ದೇಶಕರು ತಮ್ಮದೇ ಚಿತ್ರದ ಜನಪ್ರಿಯ ಪಾತ್ರಗಳನ್ನು ಮತ್ತೊಂದು ಸಿನಿಮಾದಲ್ಲಿ ತರುವುದರ ಮೂಲಕ ತಮ್ಮದೇ ಆದ ಸಿನಿಮಾ ಪ್ರಪಂಚವನ್ನು ಸೃಷ್ಟಿಸುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅಂತಹ ಪ್ರಯೋಗವನ್ನು ಮಂಸೋರೆ, ‘ದೂರ ತೀರ ಯಾನ’ ಚಿತ್ರದಲ್ಲಿ ಮಾಡುತ್ತಿದ್ದಾರೆ.
‘ದೂರ ತೀರ ಯಾನ’ ಚಿತ್ರವು ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪ್ರಮಾಣ ಪತ್ರ ಪಡೆದಿದ್ದು, ಬಿಡುಗಡೆಗೆ ಅಣಿಯಾಗುತ್ತಿದೆ. ಶನಿವಾರ, ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
‘ದೂರ ತೀರ ಯಾನ’ ಚಿತ್ರವನ್ನು ಡಿ ಕ್ರಿಯೇಷನ್ಸ್ ಬ್ಯಾನರ್‍ನಡಿ ದೇವರಾಜ್ ನಿರ್ಮಿಸುತ್ತಿದ್ದು, ಈ ಚಿತ್ರಕ್ಕೆ ಮಂಸೋರೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಬಕ್ಕೇಶ್ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, ಅರುಣ್ ಸಾಗರ್, ಶ್ರುತಿ ಹರಿಹರನ್, ಸತೀಶ್ ಚಂದ್ರ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.





