ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆಯೇ, ಹೊಸ ಚಿತ್ರಗಳು ಬಿಡುಗಡೆ ಆಗುವುದಕ್ಕೆ ದೊಡ್ಡ ಪೈಪೋಟಿ ನಡೆಸಿವೆ. ಈಗಾಗಲೇ ವರ್ಷದ ಮೊದಲ ಶುಕ್ರವಾರ ಮೂರು ಚಿತ್ರಗಳು ಬಿಡುಗಡೆಯಾಗಿದ್ದು, ಮುಂದಿನ ನಾಲ್ಕು ಶುಕ್ರವಾರಗಳಂದು ಹಲವು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕ್ಯೂನಲ್ಲಿ ನಿಂತಿವೆ.
ಬಿಡುಡೆಯಾಗುವುದಕ್ಕೆ ಸಜ್ಜಾಗಿರುವ ಚಿತ್ರಗಳ ಪೈಕಿ ದೊಡ್ಡ ಸ್ಟಾರ್‍ಗಳ ಚಿತ್ರಗಳು ಯಾವುದೂ ಇಲ್ಲದಿದ್ದರೂ, ಒಂದಿಷ್ಟು ಮೀಡಿಯಂ ಬಜೆಟ್‍ನ ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.
ಈ ವರ್ಷದ ಮೊದಲ ಶುಕ್ರವಾರ (ಜನವರಿ 03) ಮೂರು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ‘ಗನ್ಸ್ ಆ್ಯಂಡ್ ರೋಸಸ್’, ‘ಸ್ವೇಚ್ಛಾ’ ಮತ್ತು ‘ಆಫ್ಟರ್ ಬ್ರೇಕಪ್’ ಎಂಬ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಮೂರು ಚಿತ್ರಗಳು ಹೊಸಬರ ಚಿತ್ರಗಳಾಗಿದ್ದು, ಮೂರಕ್ಕೆ ಮೂರೂ ಪ್ರೇಕ್ಷಕರ ಗಮನಸೆಳೆಯುವಲ್ಲಿ ವಿಫಲವಾಗಿವೆ.
ಜನವರಿ ಎರಡನೇ ವಾರದಲ್ಲಿ (ಜನವರಿ 10) ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಶರಣ್ ಅಭಿನಯದ ‘ಛೂ ಮಂತರ್’, ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’, ದಿಲೀಪ್ ರಾಜ್ ಅಭಿನಯದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಮತ್ತು ‘ಟೆಡ್ಡಿ ಬೇರ್’ ಚಿತ್ರಗಳಿವೆ. ಸಂಕ್ರಾಂತಿ ಸೀಸನ್ ಆಗಿರುವುದರಿಂದ ಪರಭಾಷೆಗಳ ಒಂದಿಷ್ಟು ಚಿತ್ರಗಳು ಸಹ ಬಿಡುಗಡೆಗೆ ಸಜ್ಜಾಗುತತಿವೆ. ಈ ಪೈಕಿ, ರಾಮ್‍ಚರಣ್ ತೇಜ ಅಭಿನಯದ ಮತ್ತು ಶಂಕರ್ ನಿರ್ದೇಶನದ ಬಹುನಿರೀಕ್ಷಿತ ‘ಗೇಮ್ ಚೇಂಜರ್’ ಬಿಡುಗಡೆಯಾಗುತ್ತಿದೆ. ಇದಲ್ಲದೆ ನಂದಮೂರಿ ಬಾಲಕೃಷ್ಣ ನಿರ್ದೇಶನದ ‘ಡಾಕು ಮಹಾರಾಜ್’ ಮತ್ತು ವೆಂಕಟೇಶ್ ಅಭಿನಯದ ‘ಸಂಕ್ರಾಂತಿ ವಸ್ತುನ್ನಾಂ’ ಸೇರಿದಂತೆ ಒಂದಿಷ್ಟು ದೊಡ್ಡ ತೆಲುಗು ಮತ್ತು ತಮಿಳು ಚಿತ್ರಗಳು ಬಿಡುಗಡೆಯಾಗುತ್ತಿವೆ.
ಜನವರಿ 17ರಂದು ಸದ್ಯ ‘ಕಣ್ಣಾಮುಚ್ಚೆ ಕಾಡೇಗೂಡೇ’, ‘ರಾಜ ರೋಜ’ ಮತ್ತು ‘ಕುಚಿಕು’ ಎಂಬ ಚಿತ್ರಗಳು ಬರುತ್ತಿವೆ. ಇದರಲ್ಲಿ ‘ಕಣ್ಣಾಮುಚ್ಚೆ ಕಾಡೇಗೂಡೇ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಿಟಟರೆ, ಮೂರೂ ಹೊಸಬರ ಚಿತ್ರಗಳೇ. ಅದಾದ ಮುಂದಿನ ವಾರ, ಅಂದರೆ ಜನವರಿ 24ರಂದು ಸಹ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’, ವಿರಾಟ್ ಅಭಿನಯದ ‘ರಾಯಲ್’ ಮತ್ತು ಅನೀಶ್ ತೇಜೇಶ್ವರ್ ಮುಂತಾದವರು ನಟಿಸಿರುವ ‘ಫಾರೆಸ್ಟ್’ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಜನವರಿ ಕೊನೆಯ ಶುಕ್ರವಾರ (ಜ 31) ಐದು ಚಿತ್ರಗಳು ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ಅಭಿನಯದ ‘ಗಣ’, ನವೀನ್ ಶಂಕರ್ ಅಭಿನಯದ ‘ನೋಡಿದವರು ಏನಂತಾರೆ’, ‘ಅಪಾಯವಿದೆ ಎಚ್ಚರಿಕೆ’, ‘ಭಗೀರಥ’ ಮತ್ತು ‘ಹೈನಾ ಚಿತ್ರಗಳು ತೆರೆಗೆ ಬರಲಿವೆ.
ಒಟ್ಟಾರೆ, ಜನವರಿ ತಿಂಗಳು ಫುಲ್ ಆಗಿದ್ದು 20ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು ಸದ್ಯಕ್ಕೆ ಸಿಕ್ಕ ಮಾಹಿತಿ ಅಷ್ಟೇ. ಮಿಕ್ಕಂತೆ, ಇನ್ನಷ್ಟು ಚಿತ್ರಗಳು ಬಿಡುಗಡೆಗೆ ಪೈಪೋಟಿ ನಡೆಸಿದ್ದು, ಒಟ್ಟು ಎಷ್ಟು ಚಿತ್ರಗಳು ತೆರೆಗೆ ಬರಬಹುದು ಎಂದು ತಿಂಗಳು ಮುಗಿದ ನಂತರ ಸ್ಪಷ್ಟತೆ ಸಿಗಲಿದೆ.





