‘ಕೃಷ್ಣ ತುಳಸಿ’, ‘ಕದ್ದುಮುಚ್ಚಿ’, ‘ಮನಸಾಗಿದೆ’, ‘ರಿದಮ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ನಾಯಕಿಯಾಗಿ ನಟಿಸಿದ್ದ ಮೇಘಶ್ರೀ, ಒಂದು ಸಣ್ಣ ಗ್ಯಾಪ್‍ನ ನಂತರ ಮತ್ತೆ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಅವರು ‘ಕುಂಟೆಬಿಲ್ಲೆ’ ಎಂಬ ಚಿತ್ರದಲ್ಲಿ ನಟಿಸಿದ್ದು, ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಹಿಂದೆ ‘ದಕ್ಷಯಜ್ಞ’ ಮತ್ತು ‘ತರ್ಲೆ ವಿಲೇಜ್’ ಚಿತ್ರಗಳನ್ನು ನಿರ್ದೇಶಿಸಿದ್ದ ಮೈಸೂರಿನ ಮೂಲದ ಜಿ.ಬಿ.ಎಸ್. ಸಿದ್ಧೇಗೌಡ, ಈಗ ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯೊಂದನ್ನು ಸಿನಿಮಾ ಮಾಡಿದ್ದಾರೆ. ‘ಕುಂಟೆಬಿಲ್ಲೆ’ ಚಿತ್ರಕ್ಕೆ ಅವರು ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದು, ಯದು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಮೇಘಶ್ರೀ ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಶಂಕರ ಅಶ್ವಥ್, ಬಲ ರಾಜವಾಡಿ, ಭವಾನಿ ಪ್ರಕಾಶ್ ಮೊದಲಾದವರು ಅಭಿನಯಿಸಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ಸಿದ್ದೇಗೌಡ, ‘ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ಕುಂಟೆಬಿಲ್ಲೆ. ಅದೇ ಶೀರ್ಷಿಕೆ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಈ ಹಳ್ಳಿಯ ಸೊಗಡಿನ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ. ಇದು ಪ್ರೀತಿ, ಸಸ್ಪೆನ್ಸ್ ಅಂಶಗಳಿರುವ ಚಿತ್ರ. ನಮ್ಮ ಕೈಯಾರೆ ನಾವೇ ನಮ್ಮ ಪ್ರೀತಿಯನ್ನು ಹೇಗೆ ಹಾಳು ಮಾಡಿಕೊಳ್ಳುತ್ತೇವೆ ಎಂಬುದರ ಸುತ್ತ ಕಥೆ ಸಾಗುತ್ತದೆ’ ಎಂದರು.
ಇದನ್ನು ಓದಿ : ‘ಕಾಂತಾರ ಅಧ್ಯಾಯ 1’ ಕನ್ನಡದ ಟ್ರೇಲರ್ ಕನ್ನಡ ಕಲಾಭಿಮಾನಿಗಳಿಂದಲೇ ಬಿಡುಗಡೆ
ನಾಯಕ ಯದು ಅವರ ತಂದೆ ಕುಮಾರ್ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. 30 ವರ್ಷದ ಹಿಂದೆ ಅವರು ಕಲಾವಿದನಾಗಬೇಕು ಎಂದು ಬೆಂಗಳೂರಿಗೆ ಬಂದಿದ್ದರಂತೆ. ಆದರೆ, ಅದು ಸಾಧ್ಯವಾಗಲಿಲ್ಲ. ಈಗ ತಮ್ಮ ಆಸೆಯನ್ನು ಮಗನ ಮೂಲಕ ಅವರು ಈಡೇರಿಸಿಕೊಳ್ಳುತ್ತಿದ್ದಾರೆ. ‘ನನ್ನ ತಂದೆಯವರ ಆಸೆ ಈಡೇರಿಸುವ ಸಲುವಾಗಿ ನಾನಿಂದು ಈ ಕ್ಷೇತ್ರಕ್ಕೆ ಬಂದಿದ್ದೇನೆ’ ಎಂದ ಯದು, ನನಗೆ ಕ್ರಿಕೆಟ್ ಆಟಗಾರನಾಗಬೇಕೆನ್ನುವ ಆಸೆ ಹೊಂದಿದ್ದೆ. ಅದಕ್ಕಾಗಿ ತರಬೇತಿ ಸಹ ಪಡೆಯುತ್ತಿದ್ದೆ.ಆದರೆ, ತಂದೆಯವರ ಆಸೆ ಈಡೇರಿಸುವುದಕ್ಕಾಗಿ ಅದನ್ನು ಅರ್ಧಕ್ಕೇ ಬಿಟ್ಟುಬಂದೆ. ನಾನು ರಂಗಭೂಮಿಯ ತರಬೇತಿ ಪಡೆದಿದ್ದು, ಈ ಚಿತ್ರದಲ್ಲಿ ಒಬ್ಬ ಕೋಳಿ ಫಾರಂನಲ್ಲಿ ಕೆಲಸ ಮಾಡುವ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಅವನೇನು ಮಾಡುತ್ತಾನೆ ಎನ್ನುವುದು ಚಿತ್ರದ ಕಥಾ ಕಥೆ’ ಎಂದರು.
ನಾಯಕ ನಟಿ ಮೇಘಶ್ರೀ ಮಾತನಾಡಿ, ‘ನನ್ನ ಪಾತ್ರ ಬಹಳ ಬೋಲ್ಡ್ ಆಗಿದೆ. ಇಂತಹಾ ಪಾತ್ರ ಮಾಡುವುದು ಸುಲಭವಲ್ಲ. ಇದು ವಿಶೇಷ ಕಥೆ ಹಾಗೂ ಪಾತ್ರವಾಗಿರುವುದರಿಂದಲೇ ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಇಡೀ ಕಥೆಯೇ ನನ್ನ ಪಾತ್ರದ ಸುತ್ತ ನಡೆಯುತ್ತದೆ. ನನ್ನ ಪಾತ್ರಕ್ಕೆ ವಿಶೇಷ ಮಹತ್ವವಿದೆ. ಅದೊಂದು ವಿಶೇಷ ದೃಶ್ಯವಿದ್ದು, ಅದನ್ನು ನೋಡಿದರೆ ಪ್ರೇಕ್ಷಕರು ಬೆಚ್ಚಿಬೀಳುತ್ತಾರೆ. ಅಂತಹ ವಿಶೇಷ ಕಥೆ ಇರುವ ಸಿನಿಮಾ ಇದು. ನಾನು ಈ ಚಿತ್ರದಲ್ಲಿ ಕುಂಟೆಬಿಲ್ಲೆ, ವಾಲಿಬಾಲ್ ಸೇರಿ ವಿವುಧ ಆಟಗಳನ್ನು ಆಡಿದ್ದೇನೆ’ ಎಂದು ಹೇಳಿದರು.
‘ಕುಂಟೆಬಿಲ್ಲೆ’ ಚಿತ್ರಕ್ಕೆ ಹರಿಕಾವ್ಯ ಸಂಗೀತ ಮತ್ತು ಮುಂಜಾನೆ ಮಂಜು ಛಾಯಾಗ್ರಹಣವಿದೆ.





