ಗುಲ್ಬರ್ಗಾದಲ್ಲಿ ಕೆಲವು ವರ್ಷಗಳ ಹಿಂದೆ ರೌಡಿ ಶೀಟರ್ ಒಬ್ಬನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಹುತಾತ್ಮರಾದರು. ಅವರ ಕುರಿತು ಚಿತ್ರ ಮಾಡುವುದಾಗಿ ಆ ಸಂದರ್ಭದಲ್ಲಿ ಕೆಲವರು ಘೋಷಿಸಿದ್ದರು. ಸುದೀಪ್ ಅಥವಾ ದರ್ಶನ್ ಅಭಿನಯದಲ್ಲಿ ‘ಬಂಡೆ’ ಎಂಬ ಚಿತ್ರ ಮಾಡುವುದಾಗಿ ಪ್ರಚಾರ ಪಡೆದರು. ಆದರೆ, ಚಿತ್ರ ಆಗಲಿಲ್ಲ.
ಇದೀಗ ಬಂಡೆ ನಿಧನರಾಗಿ 11 ವರ್ಷಗಳ ನಂತರ ಈಗ ಕೊನೆಗೂ ಅವರ ಕುರಿತು ‘ಬಂಡೆ ಸಾಹೇಬ್’ ಎಂಬ ಚಿತ್ರ ತಯಾರಾಗಿದೆ. ಮಲ್ಲಿಗೆ ಸಿನಿ ಕಂಬೈನ್ಸ್ ಲಾಂಛನದಲ್ಲಿ ಗೋಪಣ್ಣ ದೊಡ್ಮನಿ, ಕಮಲ ದೊಡ್ಮನಿ ಹಾಗೂ ಮಾಲ ವಿ. ಕೊರಳ್ಳಿ ನಿರ್ಮಿಸಿರುವ ಈ ಚಿತ್ರವನ್ನು ಚಿನ್ಮಯ್ ರಾಮ್ ನಿರ್ದೇಶಿಸಿದ್ದಾರೆ. ‘ಕುರುಕ್ಷೇತ್ರ’, ‘ದಿ ವಿಲನ್’ ಸೇರಿದಂತೆ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಚಿನ್ಮಯ್ ರಾಮ್ಗೆ ‘ಬಂಡೆ ಸಾಹೇಬ್’ ಮೊದಲ ನಿರ್ದೇಶನದ ಚಿತ್ರ.
‘ಕೃಷ್ಣ ರುಕ್ಮಿಣಿ’ ಸೇರಿದಂತೆ ಕೆಲವು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಸಂತೋಷ್ ರಾಮ್, ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಸಂತೋಷ್ ರಾಮ್‍ಗೆ ನಾಯಕನಾಗಿ ಇದು ಎರಡನೇ ಚಿತ್ರ. ಕಾವ್ಯ ಭಾರದ್ವಾಜ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ವೀರಣ್ಣ ಕೊರಳ್ಳಿ, ಬಿರಾದಾರ್, ಸಿಂಬಾ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಬಂಡೆ ಸಾಹೇಬ್’ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದ್ದು, ಗುಲ್ಬರ್ಗ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ವೀರಣ್ಣ ಕೊರಳ್ಳಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎಂ.ಎಸ್ ತ್ಯಾಗರಾಜ್ ಸಂಗೀತ, ‘ಮುಂಜಾನೆ’ ಮಂಜು ಛಾಯಾಗ್ರಹಣವಿದೆ.





