Mysore
23
scattered clouds

Social Media

ಬುಧವಾರ, 15 ಜನವರಿ 2025
Light
Dark

‘ಪೆನ್ ಡ್ರೈವ್’ನಲ್ಲಿ ಮಾಲಾಶ್ರೀ; ಚಿತ್ರೀಕರಣ ಪ್ರಾರಂಭ

ಎರಡು ತಿಂಗಳ ಹಿಂದೆಯೇ ತನಿಷಾ ಕುಪ್ಪುಂಡ ಅಭಿನಯದಲ್ಲಿ ‘ಪೆನ್‍ ಡ್ರೈವ್‍’ ಎಂಬ ಚಿತ್ರದ ಘೋಷಣೆಯಾಗಿತ್ತು. ಈಗ ಆ ಚಿತ್ರದ ಚಿತ್ರೀಕರಣ ಪ್ರಾರಂಭಭಾಗಿರುವುದಷ್ಟೇ ಅಲ್ಲ, ಚಿತ್ರತಂಡಕ್ಕೆ ಮಾಲಾಶ್ರೀ ಸಹ ಸೇರ್ಪಡೆಯಾಗಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇ ಗೌಡ ಆರಂಭ ಫಲಕ ತೋರಿದರೆ, ಹಿರಿಯ ವಕೀಲ ರೇವಣ್ಣ ಸಿದ್ದಯ್ಯ ಕ್ಯಾಮೆರಾ ಚಾಲನೆ ಮಾಡಿದರು.

‘ಪೆನ್‍ ಡ್‍ರೈವ್‍’ ಚಿತ್ರದಲ್ಲಿ ಮಾಲಾಶ್ರೀ ಅವರ ಪಾತ್ರವೇನು? ಈ ವಿಷಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿಲ್ಲ. ಅವರೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ ಎಂದಷ್ಟೇ ಹೇಳಲಾಗಿದೆ. ಮಾಲಾಶ್ರೀ ಅವರು ‘ಆ್ಯಕ್ಷನ್‍ ಕ್ವೀನ್‍’ ಎಂದೇ ಜನಪ್ರಿಯರು. ಇದುವರೆಗೂ ಹಲವಾರು ಚಿತ್ರಗಳಲ್ಲಿ ಪೊಲೀಸ್‍ ಪಾತ್ರಗಳಲ್ಲಿ ಕಾಣಿಸಿಕೊಂಡವರು. ಈ ಚಿತ್ರದಲ್ಲೂ ಅವರು ಪೊಲೀಸ್‍ ಪಾತ್ರವನ್ನೇ ಮುಂದುವರೆಸಿರಬಹುದಾ? ಎಂಬ ಪ್ರಶ್ನೆಯೊಂದು ಎದ್ದಿದೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ಮಾಲಾಶ್ರೀ ಜೊತೆಗೆ ‘ಬಿಗ್‍ ಬಾಸ್‍’ ಖ್ಯಾತಿಯ ತನಿಷಾ ಕುಪ್ಪುಂದ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತನಿಷಾ ಈಗಾಗಲೇ ಕೆಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಮಾಲಾಶ್ರೀ ಮತ್ತು ತನಿಷಾ ಕುಪ್ಪುಂಡ ಜೊತೆಗೆ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆಯುವುದರ ಜೊತೆಗೆ ಸಂಗೀತವನ್ನೂ ಸಂಯೋಜಿಸುತ್ತಿದ್ದಾರೆ.

ಆರ್.ಎಚ್‍. ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್. ಹನುಮಂತರಾಜು ಹಾಗೂ ಲಯನ್ ಎಸ್. ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಸೆಬಾಸ್ಟಿನ್ ಡೇವಿಡ್ ಕಥೆ-ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

Tags: