Mysore
28
few clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಶಿವಣ್ಣ, ದರ್ಶನ್‍ ಮತ್ತು ಧ್ರುವ ಸರ್ಜಾರಲ್ಲಿ ಕ್ಷಮೆ ಕೇಳಿದ ಮಡೆನೂರು ಮನು

ಶಿವರಾಜಕುಮಾರ್‌, ದರ್ಶನ್‍ ಮತ್ತು ಧ್ರುವ ಸರ್ಜಾ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ಮಡೆನೂರು ಮನು ಇದೀಗ ಕ್ಷಮೆ ಕೇಳಿದ್ದಾರೆ. ಇದೊಂದು ಷಡ್ಯಂತ್ರವಾಗಿದ್ದು, ತಾನು ಅನಿವಾರ್ಯವಾಗಿ ಇದ್ದರಲ್ಲಿ ಸಿಕ್ಕಿಬಿದ್ದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಸೋಷಿಯಲ್‍ ಮೀಡಿಯಾದಲ್ಲಿ ವೈರಲ್‍ ಆಗಿತ್ತು. ಈ ಆಡಿಯೋದಲ್ಲಿ ಮನು, ‘ಶಿವರಾಜಕುಮಾರ್‌ ಇನ್ನೊಂದಾರು ವರ್ಷಗಳಲ್ಲಿ ಸತ್ತೋಗ್ತಾನೆ. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ ಇರಬಹುದು. ದರ್ಶನ್‍ ಸತ್ತೋದ. ದರ್ಶನ್‍ಗೆ ಇನ್ನೊಂದು ಆರು ವರ್ಷ ಕ್ರೇಜ್ ಇರುತ್ತದೆ. ಆದರೆ, ಸಿನಿಮಾ ಮಾಡಲ್ಲ. ಈ ಮೂರು ಜನರ ಮಧ್ಯೆ ಕಾಂಪಿಟೇಷನ್‍ ಕೊಡೋಕೆ ಬಂದಿರೋ ಗಂಡುಗಲಿ ರೀ ನಾನು’ ಎಂದು ಹೇಳಿದ್ದರು. ಈ ಸಂಬಂಧ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‍ ಮಾಡುವ ನಿರ್ಧಾರವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಗೆದುಕೊಂಡಿತ್ತು.

ಚಿತ್ರರಂಗಕ್ಕೆ ಸಂಬಂಧಿಸಿದ ಅಪ್ಡೇಟ್‌ಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.. 

ಆದರೆ, ಅತ್ಯಾಚಾರ ಆರೋಪದಡಿ ಜೈಲು ಸೇರಿದ್ದ ಮನು ಈ ಪ್ರಕರಣದ ಕುರಿತು ಮಾತನಾಡಿರಲಿಲ್ಲ. ಜೈಲಿನಿಂದ ಬಿಡುಡೆಯಾದ ನಂತರ ಶಿವರಾಜ್‌ ಕುಮಾರ್, ದರ್ಶನ್‍ ಮತ್ತು ಧ್ರುವ ಸರ್ಜಾ ಅವರನ್ನು ಸಂಪರ್ಕಿಸುವುದಕ್ಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಈಗ ಅವರು ವೀಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.

ಇದ್ಯಾವುದನ್ನು ತಾನು ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ ಎಂದು ಹೇಳಿರುವ ಮನು, ‘ಎರಡು ತಿಂಗಳ ಹಿಂದೆ ಮಾಡಿದ ಆಡಿಯೋ ಈಗ್ಯಾಕೆ ಹೊರಬಂದಿದೆ ಎಂಬ ಪ್ರಶ್ನೆಯನ್ನು ಬಹಳಷ್ಟು ಜನ ನನಗೆ ಕೇಳಿದ್ದಾರೆ. ಇದೆಲ್ಲಾ ನಾನೇ ಮಾಡಿದ್ದೀನೋ, ಹೇಳಿ ಮಾಡಿಸಿದ್ದಾರೋ ನನಗೆ ಗೊತ್ತಿಲ್ಲ. ಇದೊಂದ ಷಡ್ಯಂತ್ರ ಎಂಬುದು ನನಗಷ್ಟೇ ಅಲ್ಲ, ಬಹಳಷ್ಟು ಜನರಿಗೆ ಗೊತ್ತಿದೆ. ಈ ಆಡಿಯೋದಿಂದ ಶಿವಣ್ಣ, ದರ್ಶನ್‍, ಧ್ರುವ ಸರ್ಜಾ ಮತ್ತು ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ಮನಃಪೂರ್ವಕವಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾರೆ.

ತಾನು ಯಾರಿಗೂ ಸಾವು ಬಯಸುವುದಿಲ್ಲ ಎಂದಿರುವ ಮನು, ‘ಶಿವಣ್ಣ ಅವರೇ ನನ್ನ ಸಿನಿಮಾಗೆ ಶೀರ್ಷಿಕೆ ಕೊಟ್ಟಿದ್ದು. ಅಣ‍್ಣಾವ್ರ ಫ್ಯಾಮಿಲಿ ಆಶೀರ್ವಾದ ಸಿಕ್ಕಿದೆ ಎಂದು ನಾನು ಹಲವು ಸಂದರ್ಶನಗಳಲ್ಲಿ ಹೇಳಿದ್ದೇನೆ. ಆ ದೇವರು ನನ್ನ ಆಯಸ್ಸನ್ನು ಶಿವಣ್ಣ ಅವರಿಗೆ ಕೊಡಲಿ. ದರ್ಶನ್‍ ಅವರಿಗೆ ಯಾವತ್ತೂ ಕ್ರೇಜ್‍ ಕಡಿಮೆಯಾಗುವುದಿಲ್ಲ. ಧ್ರುವ ನನಗೆ ಬಹಳ ಪ್ರೋತ್ಸಾಹಿಸಿದ್ದು, ಅವರ ಋಣ ಯಾವತ್ತೂ ನನ್ನ ಮೇಲೆ ಇರುತ್ತದೆ. ಆ ಮೂವರು ಜನರ ಆಶೀರ್ವಾದ ಪಡೆದುಕೊಂಡೇ ನಾನು ಬೆಳೆಯಬೇಕು ಎಂದು ಆಸೆಪಟ್ಟವನು. ಆದರೆ, ಮೂವರ ಹೆಸರು ಹೇಳಿ ಷಡ್ಯಂತ್ರ ಮಾಡಿ, ನನ್ನನ್ನು ಸಿಲುಕಿಸಿದ್ದಾರೆ’ ಎಂದು ಹೇಳಿದ್ದಾರೆ.

Tags:
error: Content is protected !!