ಕೆಲವು ದಿನಗಳ ಹಿಂದಷ್ಟೇ KRG ಸ್ಟುಡಿಯೋಸ್ ಸಂಸ್ಥೆಯು ‘ಶೋಧ’ ಎಂಬ ವೆಬ್‍ಸರಣಿಯನ್ನು ನಿರ್ಮಿಸಿತ್ತು. ಈ ವೆಬ್‍ಸರಣಿಯು ಜೀ5 ಓಟಿಟಿ ವೇದಿಕೆಯಲ್ಲಿ ಪ್ರಸಾರವಾಯ್ತು. ಇದೀಗ ಕನ್ನಡದ ಇನ್ನೊಂದು ಜನಪ್ರಿಯ ನಿರ್ಮಾಣ ಸಂಸ್ಥೆಯಾದ PRK ಪ್ರೊಡಕ್ಷನ್ಸ್ ಸಂಸ್ಥೆಯು ಜೀ 5 ಸಹಯೋಗದಲ್ಲಿ ವೆಬ್ ಸರಣಿ ನಿರ್ಮಿಸುತ್ತಿದೆ. ಅದೇ ‘ಮಾರಿಗಲ್ಲು’.
‘ಮಾರಿಗಲ್ಲು’ ವೆಬ್ ಸರಣಿಯು ಒಂದು ದೈವಿಕ ಥ್ರಿಲ್ಲರ್ ಆಗಿದ್ದು, ನಾಲ್ಕನೇ ಶತಮಾನದ ಕದಂಬರ ಆಳ್ವಿಕೆಯ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಕದಂಬರ ಕಾಲದಿಂದಲ್ಲೂ ಮಾರಿ ಎಂಬ ದೇವತೆಯಿಂದ ಕಾಪಾಡಲ್ಪಟ್ಟಿರುವ ನಿಧಿಯ ಕುರಿತಾಗಿ ಕಥೆ ಇದಾಗಿದ್ದು, ನಂಬಿಕೆ, ಸ್ವಾರ್ಥ, ದುರಾಸೆ ಸುತ್ತ ಸುತ್ತುತ್ತದೆ. ಈ ಸರಣಿಯಲ್ಲಿನ ಪಾತ್ರಗಳು ಯಾವ ರೀತಿ ವರ್ತಿಸುತ್ತಾರೆ, ನಿಧಿಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಎಂಬುದನ್ನು ಸರಣಿಯ ಸಾರಾಂಶ.
ಸರಣಿಯ ಕುರಿತು ಮಾತನಾಡಿರುವ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ‘ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಹಾಗೂ ಜನರ ಜೀವನವನ್ನು ಪ್ರತಿಬಿಂಬಿಸುವ ಕಥೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡುತ್ತಿದ್ದು, ಈ ಕಥೆಯು ಕೇವಲ ರಹಸ್ಯ, ಥ್ರಿಲ್ ಅಲ್ಲದೆ, ಕರ್ನಾಟಕ ಜಾನಪದ ಸಂಸ್ಕೃತಿ, ದೈವ ಭಕ್ತಿ ಮುಂತಾದ ಹಲವು ವಿಷಯಗಳನ್ನು ಒಳಗೊಂಡಿರುವ ವಿಭಿನ್ನ ಕಥೆಯಾಗಿದೆ. ಪ್ರತಿಯೊಬ್ಬರೂ ಕಣ್ಣರಳಿಸಿ ನೋಡುವಂಥಾ ಥ್ರಿಲ್ಲರ್ ಇದಾಗಲಿದೆ’ ಎಂದು ಹೇಳಿದ್ದಾರೆ.
ಈ ಹಿಂದೆ, ಪೃಥ್ವಿ ಅಂಬಾರ್ ಅಭಿನಯದ ‘ಮತ್ಸ್ಯಗಂಧ’ ಚಿತ್ರವನ್ನು ನಿರ್ದೇಶಿಸಿದ್ದ ದೇವರಾಜ್ ಪೂಜಾರಿ, ‘ಮಾರಿಗಲ್ಲು’ ವೆಬ್‍ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ಎಸ್.ಕೆ. ರಾವ್ ಅವರ ಛಾಯಾಗ್ರಹಣ ಮತ್ತು ಮುತ್ತು ಗಣೇಶ್ ಸಂಗೀತ ಈ ಸರಣಿಗಿದೆ. ಪ್ರವೀಣ್ ತೇಜ್ ಮುಂತಾದವರು ಈ ಸರಣಿಯಲ್ಲಿ ನಟಿಸುತ್ತಿದ್ದಾರೆ.





