ಒಂದಿಷ್ಟು ಸಮಯ ಪರಭಾಷೆಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಕಿಶೋರ್, ಇದೀಗ ಕನ್ನಡದ ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ, ಅವರು ಸದ್ದಿಲ್ಲದೆ ‘ಅನಾಮಧೇಯ ಅಶೋಕ್ ಕುಮಾರ್’ ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ.
ಈ ಹಿಂದೆ ‘ಆಚಾರ್ & ಕೋ’ ಚಿತ್ರದ ಮೂಲಕ ಗಮನಸೆಳೆದಿದ್ದ ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರದಲ್ಲಿ ಕಿಶೋರ್ ಸಹ ಒಂದು ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಗಿದಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
‘ಅನಾಮಧೇಯ ಅಶೋಕ್ ಕುಉಮಾರ್’ ಒಂದು ಥ್ರಿಲ್ಲರ್ ಚಿತ್ರವಾಗಿದ್ದು, ಒಬ್ಬ ಪತ್ರಕರ್ತ ಮತ್ತು ಪೊಲೀಸ್ ಅಧಿಕಾರಿಯ ಸುತ್ತ ಸುತ್ತುವ ಚಿತ್ರವಾಗಿದೆ. ಪತ್ರಕರ್ತನ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಹರ್ಷಿಲ್ ಕೌಶಿಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಸಾಗರ್ ಕುಮಾರ್ ಅವರೇ ಕಥೆ ಬರೆದಿದ್ದಾರೆ. ಚಿತ್ರಕಥೆಯನ್ನು ಬೆನ್ನಿ ಥಾಮಸ್ ಹಾಗೂ ಸಾಗರ್ ಕುಮಾರ್ ಬರೆದಿದ್ದಾರೆ. ಮೂಲತಃ ಐಟಿ ಉದ್ಯೋಗಿಯಾಗಿರುವ ಸಾಗರ್ ಕುಮಾರ್ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ..
ಎಸ್.ಕೆ.ಎನ್ ಫಿಲಂಸ್ ಲಾಂಛನದಲ್ಲಿ ನಿರ್ಮಲಾ ಕುಮಾರ್ ಹಾಗು ರಮ್ಯ ಸಾಗರ್ ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಅಜಾದ್ ಸಂಗೀತ ಸಂಯೋಜಿಸಿದ್ದಾರೆ. ಸುನೀಲ್ ಹೊನ್ನಳ್ಳಿ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಾಂತರಾಜ್ ‘ಕಡ್ಡಿಪುಡಿ’, ಸುಧೀಂದ್ರನ್ ನಾಯರ್ ಮುಂತಾದವರು ನಟಿಸಿದ್ದಾರೆ.