‘ಕಾಂತಾರ – ಚಾಪ್ಟರ್ 1’ ಚಿತ್ರದ ಟ್ರೇಲರ್, ಸೆ. 22ರಂದು ಮಧ್ಯಾಹ್ನ 12:45ಕ್ಕೆ ಬಿಡಗುಡೆಯಾಗಲಿದೆ ಎಂಬ ವಿಷಯ ಗೊತ್ತೇ ಇದೆ. ಆದರೆ, ಈ ಟ್ರೇಲರನ್ನು ಯಾರು ಬಿಡುಗಡೆ ಮಾಡುತ್ತಾರೆ ಎಂಬ ವಿಷಯ ಗೊತ್ತಿರಲಿಲ್ಲ. ಈಗ ಆ ಮಾಹಿತಿಯೂ ಹೊರಬಿದ್ದಿದೆ.
ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಈ ಚಿತ್ರದ ಟ್ರೇಲರ್, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಅನಾವರಣವಾಗಲಿದೆ. ಕನ್ನಡದ ಕಲಾಭಿಮಾಗಳಿಂದಲೇ ಕನ್ನಡದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ವಿಶೇಷ. ಮಿಕ್ಕಂತೆ ಹೃತಿಕ್ ರೋಶನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಭಾಸ್ ಕ್ರಮವಾಗಿ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.
‘ಕಾಂತಾರ ಚಾಪ್ಟರ್ 1’ ಚಿತ್ರವು ಅಕ್ಟೋಬರ್ 02ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
‘ಕಾಂತಾರ – ಚಾಪ್ಟರ್ 1’ ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಹಿಂದಿಯ ಡಬ್ಬಿಂಗ್ ಮತ್ತು ಉತ್ತರಭಾರತ ಮತ್ತು ನೇಪಾಳದ ವಿತರಣೆ ಹಕ್ಕುಗಳನ್ನು AA Films ಸಂಸ್ಥೆಯು ತನ್ನದಾಗಿಸಿಕೊಂಡಿದೆ. ಸಸಚಿತ್ರದ ಓವರ್ಸೀಸ್ ಹಕ್ಕುಗಳನ್ನು PHF ಸಂಸ್ಥೆಯು ಪಡೆದುಕೊಂಡಿದ್ದು, ಅದರಲ್ಲಿ ಇಂಗ್ಲೆಂಡ್ ಭಾಗದಲ್ಲಿ ಲಾಫಿಂಗ್ ವಾಟರ್ ಎಂಟರ್‍ಟೈನ್‍ಮೆಂಟ್ ಸಂಸ್ಥೆಯು ಬಿಡುಗಡೆ ಮಾಡುತ್ತಿದೆ.





