ಕನ್ನಡದಲ್ಲಿ ಇದುವರೆಗೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಯಶ್ ಅಭಿನಯದ ‘ಕೆಜಿಎಫ್ – ಚಾಪ್ಟರ್ 2’ ಮತ್ತು ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಗಳಿದ್ದವು. ಈಗ ಆ ದಾಖಲೆಯನ್ನು ‘ಕಾಂತಾರ – ಚಾಪ್ಟರ್ 1’ ಮುರಿದಿದೆ.
ಇತ್ತೀಚೆಗೆ, ಚಿತ್ರವನ್ನು ನಿರ್ಮಿಸಿರುವ ಹೊಂಬಾಲೆ ಫಿಲಂಸ್ ಸಂಸ್ಥೆಯು ಚಿತ್ರದ ಗಳಿಕೆಯನ್ನು ಬಹಿರಂಗಪಡಿಸಿದ್ದು, ಚಿತ್ರವು ಒಂದು ತಿಂಗಳಲ್ಲಿ ಜಾಗತಿಕವಾಗಿ 867 ಕೋಟಿ ರೂ. ಸಂಗ್ರಹಿಸಿದೆ. ಈ ಪೈಕಿ ‘ಕಾಂತಾರ’ ಚಿತ್ರವು ಕರ್ನಾಟಕದಲ್ಲಿ 268 ಕೋಟಿ ರೂ. ಗಳಿಕೆ ಮಾಡಿದ್ದು, ರಾಜ್ಯದಲ್ಲಿ 200 ಕೋಟಿ ರೂ. ಗಡಿ ದಾಟಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನು ಓದಿ: ರಕ್ತ ಕಾಶ್ಮೀರ’ವನ್ನು ತೋರಿಸಲು ಬಾಬು ರೆಡಿ; ನವೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆ
ಬರೀ ಕರ್ನಾಟಕವಷ್ಟೇ ಅಲ್ಲ, ಚಿತ್ರ ಬಿಡುಗಡೆಯಾದ ಬೇರೆ ಕಡೆಗಳಲ್ಲೂ ಹೊಸ ದಾಖಲೆಯನ್ನೇ ಮಾಡಿದೆ. ಚಿತ್ರವು ಜಾಗತಿಕವಾಗಿ 867 ಕೋಟಿ ರೂ. ಗಳಿಕೆ ಮಾಡಿದ್ದು, ಇದರಲ್ಲಿ ವಿದೇಶಿ ಮಾರುಕಟ್ಟೆಯಿಂದ 116 ಕೋಟಿ ರೂ. ಗಳಿಕೆ ಮಾಡಿದರೆ, ಭಾರತದಲ್ಲಿ 751 ಕೋಟಿ ರೂ. ಸಂಗ್ರಹಿಸಿದೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ‘ಛಾವಾ’ ಚಿತ್ರವಿತ್ತು. ಅದರ ಗಳಿಕೆಯನ್ನು ‘ಕಾಂತಾರ – ಚಾಪ್ಟರ್ 1’ ಮುರಿದಿದೆ.
‘ಕಾಂತಾರ – ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.
ಇನ್ನು, ಚಿತ್ರವು ಅಕ್ಟೋಬರ್ 31ರಿಂದ ಅಮೇಜಾನ್ ಪ್ರೈಮ್ ಓಟಿಟಿಯಲ್ಲಿ ಲಭ್ಯವಿದೆ. ಚಿತ್ರವು ಕನ್ನಡವಲ್ಲದೆ ಬೇರೆ ಭಾಷೆಗಳಲ್ಲೂ ಅಲ್ಲಿ ಸ್ಟ್ರೀಮ್ ಆಗುತ್ತಿದೆ.





