ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರದ ಮೊದಲ ವಾರದ ಗಳಿಕೆಯ ಬಗ್ಗೆ ಗುರುವಾರದಿಂದಲೂ ಚರ್ಚೆಯಾಗುತ್ತಲೇ ಇತ್ತು. ಕೆಲವರು ಚಿತ್ರವು ಮೊದಲ ವಾರ 400 ಕೋಟಿ ರೂ. ಗಳಿಕೆ ಮಾಡಿದೆ ಎಂದರೆ, ಇನ್ನೂ ಕೆಲವರು 500 ಕೋಟಿ ರೂ. ದಾಟಿದೆ ಎಂಬ ಚರ್ಚೆ ನಡೆದಿತ್ತು. ಈಗ ಚಿತ್ರ ನಿರ್ಮಿಸಿರುವ ಹೊಂಬಾಳೆ ಸಂಸ್ಥೆಯೇ ಚಿತ್ರದ ಗಳಿಕೆಯನ್ನು ಬಹಿರಂಗಪಡಿಸಿದೆ.
ಶುಕ್ರವಾರ, ಹೊಂಬಾಳೆ ಫಿಲಂಸ್ ಸಂಸ್ಥೆಯು ಚಿತ್ರದ ಮೊದಲ ವಾರದ ಗಳಿಕೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದು, ಅದರ ಪ್ರಕಾರ, ಚಿತ್ರವು ಮೊದಲ ವಾರ ಜಗತ್ತಿನಾದ್ಯಂತ 509.25 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ 500 ಕೋಟಿ ರೂ. ಗಳಿಕೆ ಮಾಡಿದ ಎರಡನೇ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ‘ಕೆಜಿಎಫ್ – ಚಾಪ್ಟರ್ 2’ ಚಿತ್ರವು 1000 ಕೋಟಿ ರೂ. ಕ್ಲಬ್ ಸೇರಿತ್ತು. ಈಗ 500 ಕೋಟಿ ರೂ. ಗಳಿಕೆ ಮಾಡಿದ ಎರಡನೇ ಸ್ಥಾನದಲ್ಲಿ ‘ಕಾಂತಾರ – ಚಾಪ್ಟರ್ 1’ ಬಂದಿದೆ. ವಿಶೇಷವೆಂದರೆ, ಈ ಎರಡೂ ಚಿತ್ರಗಳನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಂಸ್.
ಇದನ್ನು ಓದಿ : ಮೂರು ದಿನಗಳಲ್ಲಿ 163 ಕೋಟಿ ರೂ. ಗಳಿಕೆ ಮಾಡಿದ ‘ಕಾಂತಾರ – ಚಾಪ್ಟರ್ 1’
ಒಂದು ಕಡೆ ಒಳ್ಳೆಯ ಗಳಿಕೆಯ ಜೊತೆಗೆ, ಚಿತ್ರ ನೋಡಿಬಂದ ಕೆಲವರ ಮೇಲೆ ದೈವ ಆವಾಹನೆಯಾಗುತ್ತಿರುವ ಮತ್ತು ದೈವಪಾತ್ರಗಳನ್ನು ಅನುಸರಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ಸುದ್ದಿಯಾಗುತ್ತಿದೆ. ಈ ಸಂಬಂಧ ಚಿತ್ರತಂಡದವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ದೈವಪಾತ್ರಗಳನ್ನು ಅನುಸರಿಸಬೇಡಿ ಮತ್ತು ದೈವಾರಾಧನೆಯ ಪಾವಿತ್ರ್ಯತೆ ಕಾಪಾಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ.





