Mysore
18
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ರಾಮರಸ’ ಕುಡಿಸಲು ಬಂದ ‘ಅಧ್ಯಕ್ಷ’ ಚೆಲುವೆ ಹೆಬಾ …

ಸುಮಾರು 10 ವರ್ಷಗಳ ಹಿಂದೆ ಶರಣ್‍ ಅಭಿನಯದ ‘ಅಧ್ಯಕ್ಷ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮುಂಬೈ ಮೂಲದ ಹೆಬಾ ಪಟೇಲ್‍, ಆ ನಂತರ ಕನ್ನಡಕ್ಕಿಂತ ತೆಲುಗು ಚಿತ್ರರಂಗದಲ್ಲೇ ಬ್ಯುಸಿಯಾಗಿದ್ದರು. ಅಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಬಹಳ ದಿನಗಳ ನಂತರ ಅವರು ಕನ್ನಡಕ್ಕೆ ವಾಪಸ್ಸಾಗಿದ್ದಾರೆ. ಗುರು ದೇಶಪಾಂಡೆ ನಿರ್ಮಾಣದ ‘ರಾಮರಸ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಂದು ಹೆಬಾ ಪಟೇಲ್‍ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್‍ ಬಿಡುಗಡೆ ಮಾಡಲಾಗಿದೆ. ‘ರಾಮರಸ’ ಚಿತ್ರದಲ್ಲಿ ಹೆಬಾ ಪಟೇಲ್‍, ಭ್ರಮರಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಪಾತ್ರವೇನು ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ‘ಅವಳ‌ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ‌ ಮೇಲೆ ಉಳಿದೇ ಇಲ್ಲ. ಗಂಡಸರ ಪಾಲಿಗೆ ಆಕೆ ರಹಸ್ಯ. ಆಕೆಯ ಹೆಸರು ಭ್ರಮರಿ’ ಎಂದು ಹೆಬಾ ಪಟೇಲ್‍ ಅವರನ್ನು ಪರಿಚಯಿಸಲಾಗಿದೆ.

ಜಿ ಸಿನಿಮಾಸ್‍ ಲಾಂಛನದಲ್ಲಿ ಗುರು ದೇಶಪಾಂಡೆ ನಿರ್ಮಿಸುತ್ತಿರುವ ‘ರಾಮರಸ’ ಚಿತ್ರವನ್ನು ‘ಜಟ್ಟ’ ಗಿರಿರಾಜ್‍ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಗುರು ದೇಶಪಾಂಡೆ ನಿರ್ಮಾಣದ ನಾಲ್ಕನೇ ಚಿತ್ರ. ಈ ಹಿಂದೆ ಅವರು ‘ಜಂಟಲ್‍ಮ್ಯಾನ್‍’, ‘ಪೆಂಟಗನ್‍’ ಮತ್ತು ‘ಲವ್‍ ಯು ರಚ್ಚು’ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ‘ರಾಮರಸ’ ಒಂದು ಹಾರಾರ್ ಕಾಮಿಡಿ ಜಾನರ್‍ನ ಚಿತ್ರವಾಗಿದ್ದು, ಜಿ ಅಕಾಡೆಮಿಯ 16 ಜನ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ.

‘ರಾಮರಸ’ ಚಿತ್ರದಲ್ಲಿ ‘ಬಿಗ್‍ ಬಾಸ್‍’ ವಿಜೇತ ಕಾರ್ತಿಕ್‍ ಮಹೇಶ್‍ ನಾಯಕನಾಗಿ ನಟಿಸುತ್ತಿದ್ದಾರೆ. ಹೆಬಾ ಪಟೇಲ್‍ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿವೆ. ಈ ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ಸಂಯೋಜಿಸುತ್ತಿದ್ದಾರೆ.

Tags:
error: Content is protected !!