Mysore
22
broken clouds
Light
Dark

ತಮಿಳಿಗೆ ಹೊರಟ ಚೈತ್ರಾ ಆಚಾರ್‍; ಶಶಿಕುಮಾರ್‍ ಚಿತ್ರಕ್ಕೆ ನಾಯಕಿ

ಇತ್ತೀಚಿನ ದಿನಗಳಲ್ಲಿ ಕನ್ನಡದ ಹಲವು ನಟಿಯರು ಬೇರೆಬೇರೆ ಭಾಷೆಗಳತ್ತ ಮುಖ ಮಾಡುತ್ತಿದ್ದಾರೆ. ಈಗ ಆ ಸಾಲಿಗೆ ‘ಸಪ್ತ ಸಾಗರದಾಚೆ ಎಲ್ಲೋ’ , ‘ಬ್ಲಿಂಕ್‍’ ಮುಂತಾದ ಚಿತ್ರಗಳ ಖ್ಯಾತಿಯ ಚೈತ್ರಾ ಆಚಾರ್‍ ಸಹ ಒಬ್ಬರು.

ಚೈತ್ರಾ ಇದೀಗ ತಮಿಳಿಗೆ ಹೊರಟಿದ್ದಾರೆ. ತಮಿಳಿನ ಜನಪ್ರಿಯ ನಟ ಶಶಿಕುಮಾರ್‍ ಅಭಿನಯದ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಜು ಮುರುಗನ್‍ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಸದ್ಯ ತಮಿಳುನಾಡಿನ ಕೋವಿಲ್‍ಪಟ್ಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ‘2.0’, ‘ವಾಲಿಮೈ’ ಮುಂತಾದ ಚಿತ್ರಗಳ ಛಾಯಾಗ್ರಾಹಕರಾದ ನೀರವ್‍ ಶಾ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.

ಚೈತ್ರಾ ಕನ್ನಡ ಚಿತ್ರರಂಗಕ್ಕೆ ಬಂದು ಐದು ವರ್ಷಗಳಾಗಿವೆ. ‘ಮಾಹಿರಾ’ ಚಿತ್ರದ ಮೂಲಕ ಕನ್ನಡದಲ್ಲಿ ನಟಿಯಾಗಿ ಗುರುತಿಸಿಕೊಂಡ ಅವರು, ‘ಗಿಲ್ಕಿ’, ‘ತಲೆದಂಡ’, ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’, ‘ಬ್ಲಿಂಕ್‍’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಚೈತ್ರಾ ಅಭಿನಯದ ‘ಹ್ಯಾಪಿ ಬರ್ಥ್‍ಡೇ ಟು ಮಿ’ ಎಂಬ ಚಿತ್ರವು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿದೆ.

ಇದಲ್ಲದೆ, ಶಿವರಾಜಕುಮಾರ್ ಮತ್ತು ಧನಂಜಯ್‍ ಅಭಿನಯದ ‘ಉತ್ತರಕಾಂಡ’, ರಾಜ್‍ ಬಿ ಶೆಟ್ಟಿ ಅಭಿನಯದ ‘ರೂಪಾಂತರ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ, ಅವರಿಗೆ ತೆಲುಗು ಮತ್ತು ತಮಿಳಿನಿಂದ ಹೆಚ್ಚುಹೆಚ್ಚು ಅವಕಾಶಗಳು ಬರುತ್ತಿವೆಯಂತೆ. ಆದರೆ, ಪಾತ್ರಗಳ ವಿಷಯದಲ್ಲಿ ಚ್ಯೂಸಿಯಾಗಿರುವ ಚೈತ್ರಾ, ಶಶಿಕುಮಾರ್‍ ಅಭಿನಯದ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರ. ಮುಂದಿನ ದಿನಗಳಲ್ಲಿ ನೋಡಿಕೊಂಡು ಇನ್ನಷ್ಟು ಒಳ್ಳೆಯ ಚಿತ್ರದ ಭಾಗವಾಗುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ನಟನೆಯ ಜೊತೆಗೆ ಒಳ್ಳೆಯ ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಚೈತ್ರಾ, ‘ಸಾರ್ವಜನಿಕರಿಗೆ ಸುವರ್ಣಾವಕಾಶ’, ‘ಮಾಯಬಜಾರ್‍ 2016’, ‘ಗರುಡ ಗಮನ ಋಷಭ ವಾಹನ’, ‘ಟಗರು ಪಲ್ಯ’ ಮುಂತಾದ ಚಿತ್ರಗಳಿಗೆ ಹಾಡಿದ್ದು, ಇತ್ತೀಚೆಗೆ ‘ರೂಪಾಂತರ’ ಚಿತ್ರಕ್ಕೆ ಹಾಡಿರುವ ‘ಕಿತ್ತಾಳೆ’ ಹಾಡು ಸಾಕಷ್ಟು ಜನಪ್ರಿಯವಾಗಿದೆ.