‘ಬೆಂಗಳೂರು ಬಾಯ್ಸ್’ ನಂತರ ಸಚಿವ ಚಲುವರಾಯಸ್ವಾಮಿ ಮಗ ಸಚಿನ್ ಚಲುವರಾಯಸ್ವಾಮಿ ಸದ್ದಿಲ್ಲದೆ ಹೊಸ ಚಿತ್ರವೊಂದರಲ್ಲಿ ನಟಿಸಿದ್ದಾರೆ. ತಮ್ಮ ಮೊದಲ ಚಿತ್ರದಂತೆ, ಈ ಬಾರಿಯೂ ಚಿತ್ರವನ್ನು ಅವರ ತಾಯಿ ಬಿ.ಕೆ. ಧನಲಕ್ಷ್ಮೀ ನಿರ್ಮಿಸಿದರೆ, ನಟ ರಾಜವರ್ಧನ್ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ‘ಕಮಲ್ ಶ್ರೀದೇವಿ’ ಎಂಬ ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
‘ಕಮಲ್ ಶ್ರೀದೇವಿ’ ಚಿತ್ರದಲ್ಲಿ ಸಚಿನ್ ಜೊತೆಗೆ ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ, ಮಿತ್ರ, ಎಂ.ಎಸ್. ಉಮೇಶ್ ಮುಂತಾದವರು ನಟಿಸಿದ್ದು, ‘ಗಜರಾಮ’ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿ.ಎ. ಸುನೀಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟ ಎಂ.ಎಸ್. ಉಮೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದೊಂದು ಮರ್ಡರ್ ಮಿಸ್ಟ್ರಿ ಚಿತ್ರವಾಗಿದ್ದು, ಈ ಚಿತ್ರಕ್ಕೂ ಕಮಲ್ ಹಾಸನ್ ಮತ್ತು ಶ್ರೀದೇವಿ ಅವರಿಗೂ ಯಾವದೇ ಸಂಬಂಧವಿಲ್ಲವಂತೆ. ಒಂದು ಕ್ರೈಮ್ ನಡೆಯುತ್ತದೆ. ಅದನ್ನು ಯಾರು ಮಾಡಿದರು ಎಂಬುದೇ ಚಿತ್ರದ ಕಥೆ. ಚಿತ್ರದಲ್ಲೊಂದು ಚಿತ್ರವಿದ್ದು, ಆ ಚಿತ್ರದ ನಿರ್ದೇಶಕನಾಗಿ ಸಚಿನ್ ಕಾಣಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಈ ಚಿತ್ರಕ್ಕೆ ‘ಮಮ್ಮಿ’ ಚಿತ್ರದ ನಿರ್ದೇಶಕ ಲೋಹಿತ್ ಕಥೆ ಕೊಟ್ಟರಂತೆ. ಇನ್ನು, ‘ಗೊಂಬೆಗಳ ಲವ್’ ಖ್ಯಾತಿಯ ಸಂತು ಶೀರ್ಷಿಕೆ ಕೊಟ್ಟದ್ದಾರೆ. ‘ಕಮಲ್ ಶ್ರೀದೇವಿ’ ಚಿತ್ರಕ್ಕೆ ಕೀರ್ತನ್ ಸಂಗೀತ, ನಾಗೇಶ್ ಆಚಾರ್ಯ ಛಾಯಾಗ್ರಹಣ ಮತ್ತು ಜ್ಞಾನೇಶ್ ಅವರ ಸಂಕಲನವಿದೆ.





