ತಮಿಳು ಚಿತ್ರರಂಗದ ಜನಪ್ರಿಯ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಹೊಸ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಮೊದಲು ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ನಂತರ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಅವರಿಬ್ಬರನ್ನೂ ಬಿಟ್ಟು, ಮೂರನೆಯ ವ್ಯಕ್ತಿಯೊಬ್ಬರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ರಜನಿಕಾಂತ್ ಅಭಿನಯದ 173ನೇ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸುಂದರ್ ಸಿ. ಖುಷ್ಬೂ ಅವರ ಪತಿಯಾಗಿರುವ ಸುಂದರ್, ಈ ಹಿಂದೆ ರಜನಿಕಾಂತ್ ಅಭಿನಯದಲ್ಲಿ ‘ಅರುಣಾಚಲಂ’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ 1997ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಇದೀಗ 28 ವರ್ಷಗಳ ನಂತರ ರಜನಿಕಾಂತ್ ಅಭಿನಯದಲ್ಲಿ ಸುಂದರ್ ಹೊಸ ಚಿತ್ರ ನಿರ್ದೇಶಿಸಲಿದ್ದಾರೆ.
ಇದನ್ನು ಓದಿ: ಸಿನಿ ಪಯಣಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ವಿದಾಯ?
ವಿಶೇಷವೆಂದರೆ, ಈ ಚಿತ್ರವನ್ನು ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆಯಾದ ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಮೂಲಕ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಹಿಂದೆ ರಾಜ್ ಕಮಲ್ ಸಂಸ್ಥೆಯು ಕಮಲ್ ಹಾಸನ್ ಸೇರಿದಂತೆ ತಮಿಳು ಚಿತ್ರರಂಗದ ಹಲವು ಜನಪ್ರಿಯ ನಟರ ಚಿತ್ರಗಳನ್ನು ನಿರ್ಮಿಸಿತ್ತು. ಇದೇ ಮೊದಲ ಬಾರಿಗೆ ರಜನಿಕಾಂತ್ ಅಭಿನಯದ ಚಿತ್ರವನ್ನು ರಾಜ್ ಕಮಲ್ ನಿರ್ಮಿಸುತ್ತಿದೆ.
ಈ ಚಿತ್ರಕ್ಕೆ ‘ತಲೈವರ್ 173’ ಎಂಬ ಹೆಸರಿಡಲಾಗಿದ್ದು, ಇಲ್ಲಿ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್ ಚಿತ್ರದಲ್ಲಿ ಅತಿಥಿಯಾಗಿ ನಟಿಸಲಿದ್ದಾರೆ. ಈ ಹಿಂದೆ ರಜನಿಕಾಂತ್ ಅಭಿನಯದ ‘ತಿಲ್ಲುಮುಲ್ಲು’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಮಲ್ ಹಾಸನ್ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ‘ತಲೈವರ್ 173’ ಚಿತ್ರದಲ್ಲೂ ರಜನಿಕಾಂತ್ ಜೊತೆಗೆ ಕಮಲ್ ಹಾಸನ್ ನಟಿಸಲಿದ್ದಾರಂತೆ.
ಸದ್ಯಕ್ಕೆ ಈ ಚಿತ್ರದ ಘೋಷಣೆಯಾಗಿದ್ದು, ಮುಂದಿನ ವರ್ಷ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ವಿಶೇಷವೆಂದರೆ, ಚಿತ್ರದ ಬಿಡುಗಡೆಯನ್ನೂ ಘೋಷಿಸಲಾಗಿದ್ದು, 2027ರ ಸಂಕ್ರಾಂತಿ ಹಬ್ಬಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.





