ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಬಹು ನಿರೀಕ್ಷಿತ ‘ಕಾಂತಾರ ಅಧ್ಯಾಯ 1’ ಚಿತ್ರವು ಅಕ್ಟೋಬರ್.02ರಂದು ಬಿಡಗುಡೆಯಾಗುತ್ತಿದ್ದು, ಅಡ್ವಾನ್ಸ್ ಬುಕ್ಕಿಂಗ್ ಮೂಲಕ ಭರ್ಜರಿ ಟಿಕೆಟ್‍ಗಳು ಮಾರಾಟವಾಗುತ್ತಿವೆ.
ಈ ಚಿತ್ರಕ್ಕೆ ರಿಷಭ್ ಶೆಟ್ಟಿ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿ, ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಜವಾಬ್ದಾರಿಗಳಿಗೆ ಅವರು ಪಡೆದಿರುವ ಸಂಭಾವನೆ ಎಷ್ಟು? ಒಂದು ರೂಪಾಯಿಯೂ ಪಡೆದಿಲ್ಲ ಎಂಬ ಸುದ್ದಿಯೊಂದು ರಾಷ್ಟ್ರೀಯ ಮಾಧ್ಯಮಗಳಿಂದ ಕೇಳಿಬರುತ್ತಿದೆ. ಅದರ ಪ್ರಕಾರ, ರಿಷಭ್ ಈ ಚಿತ್ರಕ್ಕೆ ಸಂಭಾವನೆ ಪಡೆಯುವುದರ ಬದಲು ಪ್ರಾಫಿಟ್ ಶೇರಿಂಗ್ ಆಯ್ಕೆ ಮಾಡಿಕೊಂಡಿದ್ದಾರಂತೆ. ಅಂದರೆ, ಚಿತ್ರದಲ್ಲಿ ಬರುವ ಲಾಭದಲ್ಲಿ ಇಷ್ಟು ಪರ್ಸಂಟೇಜ್ ಎಂದು ಅವರು ಸಂಭಾವನೆ ಪಡೆಯಲಿದ್ದಾರೆ. ಚಿತ್ರ ಎಷ್ಟು ಲಾಭ ಮಾಡುತ್ತದೋ, ಅವರ ಗಳಿಕೆ ಸಹ ಹೆಚ್ಚಾಗುತ್ತಾ ಹೋಗುತ್ತದೆ.
ಇದನ್ನು ಓದಿ: ‘ದಿ ರಾಜಾಸಾಬ್’ ಟ್ರೈಲರ್ ಬಿಡುಗಡೆ: 2026ರ ಜನವರಿ 09ಕ್ಕೆ ಚಿತ್ರ
‘ಕಾಂತಾರ – ಚಾಪ್ಟರ್ 1’ ಚಿತ್ರವು ಭಾರತದಲ್ಲಿ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕಾಂತಾರ – ಚಾಪ್ಟರ್ 1’ ಬಿಡುಗಡೆ ಆಗಲಿದೆ. ಜಗತ್ತಿನ 30 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಸ್ಪಾನಿಶ್ ಭಾಷೆಗೆ ಡಬ್ ಆಗುತ್ತಿದ್ದು, ಸ್ಪಾನಿಶ್ ಭಾಷೆಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗುತ್ತಿದೆ. ಕನ್ನಡ ಚಿತ್ರಗಳು ಉತ್ತರ ಅಮೇರಿಕಾದಲ್ಲಿ ಬಿಡಗುಡೆಯಾಗುವುದು ಹೊಸದೇನಲ್ಲ. ದಕ್ಷಿಣ ಅಮೇರಿಕಾದಲ್ಲಿ, ಅದರಲ್ಲೂ ಮೆಕ್ಸಿಕೋ ಮುಂತಾದ ದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.
‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.





