‘ನನಗೆ ನೀವು ಪ್ರೀತಿಯಿಂದ ‘ಗೋಲ್ಡನ್ ಸ್ಟಾರ್’ ಅಂತ ಕರೆದಿದ್ದೀರಿ. ಅಷ್ಟು ಸಾಕು. ‘ಜಿ ಬಾಸ್’ ಎಂದು ಕರೆಯಬೇಡಿ’ ಎಂದು ಗಣೇಶ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಗುರುವಾರ ಬಿಡುಗಡೆಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಖುಷಿಯಿಂದ ‘ಜಿ ಬಾಸ್’ ಎಂದು ಕರೆದಿದ್ದು ಗಣೇಶ್ ಗಮನಕ್ಕೆ ಬಂದಿದೆ. ಹಾಗೆ ಕರೆಯಬೇಡಿ ಎಂದು ಗಣೇಶ್ ಬಹಳ ನಯವಾಗಿ ತಮ್ಮಅಭಿಮಾನಿಗಳಿಗೆ ಚಿತ್ರದ ಸಂತೋಷಕೂಟದಲ್ಲಿ ಮನವಿ ಮಾಡಿಕೊಂಡಿದ್ದಾರೆ.
‘ಅಭಿಮಾನಿಗಳು ಇತ್ತೀಚೆಗೆ ಸಂಭ್ರಮದಲ್ಲಿ ನನ್ನನ್ನು ‘ಜಿ ಬಾಸ್’ ಅಂತ ಕರೆಯುತ್ತಿದ್ದರು. ದಯಮಾಡಿ ನನ್ನನ್ನು ‘ಜಿ ಬಾಸ್’ ಅಂತೆಲ್ಲಾ ಕರೆಯಬೇಡಿ. ನಾನು ನಿಮ್ಮ ಮನೆಯ ಹುಡುಗ ಗಣೇಶ್. ಪ್ರೀತಿಯಿಂದ ‘ಗೋಲ್ಡನ್ ಸ್ಟಾರ್’ ಎಂಬ ಕರೆದಿದ್ದೀರಿ. ನನಗೆ ಅಷ್ಟು ಸಾಕು. ‘ಜಿ ಬಾಸ್’ ಅಂತ ಕರೆಯಬೇಡಿ’ ಎಂದು ಗಣೇಶ್ ಹೇಳಿದ್ದಾರೆ.
ಇನ್ನು, ಈ ಚಿತ್ರಕ್ಕೆ ಜನ ತೋರುತ್ತಿರುವ ಪ್ರೀತಿಯ ಬಗ್ಗೆ ಗಣೇಶ್ ಬಹಳ ಖುಷಿಯಾಗಿದ್ದಾರೆ. ‘ಮಂಡ್ಯದಲ್ಲಿ ಒಂದೇ ಕುಟುಂಬದ 30 ಜನ ಒಟ್ಟಿಗೆ ಬಂದು ಚಿತ್ರ ನೋಡಿದ್ದಾರೆ. ಇದು ಅವರು ನನ್ನ ಮೇಲೆ ಇಟ್ಟ ಪ್ರೀತಿಯನ್ನು ತೋರಿಸುತ್ತದೆ. ಪ್ರತೀ ಸಿನಿಮಾದಲ್ಲೂ ಜನರನ್ನು ಮನರಂಜಿಸುವ ಕೆಲಸ ಮಾಡುತ್ತಿರುತ್ತೀನಿ. ಅದು ಈ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಆಗಿದೆ. ನಿರ್ದೇಶಕರು 50 ಲಕ್ಷ ಜನ ನೋಡಿದರೆ ಸಾಕು ಎಂದರು. ನನಗೆ 30 ಲಕ್ಷ ಜನ ನೋಡುತ್ತಾರೆ ಎಂಬ ಭರವಸೆ ಇದೆ. ಚಿತ್ರ ನೋಡಿ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದ’ ಎಂದರು.
‘ಕೃಷ್ಣಂ ಪ್ರಣಯ ಸಖಿ’ ಚಿತ್ರವನ್ನು ಗೆಲ್ಲಿಸಿದ ಜನರಿಗೆ ಥ್ಯಾಂಕ್ಸ್ ಹೇಳುವುದಕ್ಕೆ ಗಣೇಶ್ ನಿರ್ಧರಿಸಿದ್ದು, ಇದೇ ಮೊದಲ ಬಾರಿಗೆ ಅವರು ಟೂರ್ ಮಾಡಿ ಧನ್ಯವಾದ ಹೇಳುತ್ತಾರಂತೆ. ‘ಮೊದಲು ನಾವು ಹುಬ್ಬಳ್ಳಿಯಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡಬೇಕು ಎಂಬ ಯೋಚನೆ ಇತ್ತು. ಆದರೆ, ಸಾಧ್ಯವಾಗಲಿಲ್ಲ. ಈ ಬಾರಿ ಯಶಸ್ಸಿನ ಸಮಾರಂಭವನ್ನು ದೊಡ್ಡ ಮಟ್ಟದಲ್ಲಿ ಮಾಡುವ ಯೋಚನೆ ಇದೆ. ಅದರ ಜೊತೆಗೆ ಮುಂದಿನ ವಾರದಿಂದ ಕರ್ನಾಟಕದಾದ್ಯಂತ ಟ್ರಿಪ್ ಮಾಡುವ ಯೋಚನೆ ಇದೆ. ಪ್ರತಿ ಜಿಲ್ಲೆ, ತಾಲ್ಲೂಕಿಗೆ ಹೋಗಿ ಧನ್ಯವಾದ ಹೇಳಿ ಬರುತ್ತೇವೆ. ನಾನು ಯಾವತ್ತೂ ಹೀಗೆ ಟೂರ್ ಮಾಡಿದವನಲ್ಲ. ಇದೇ ಮೊದಲ ಬಾರಿಗೆ ಟೂರ್ ಮಾಡುತ್ತಿದ್ದೇನೆ’ ಎಂದರು.