ಚಂದನ್ ಕುಮಾರ್ ಅಭಿನಯದ ಮತ್ತು ನಿರ್ದೇಶನದ ‘ಫ್ಲರ್ಟ್’ ಚಿತ್ರವು ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ನವೆಂಬರ್.07ರಂದು ಬಿಡಗುಡೆಯಾಗಬೇಕಿತ್ತು. ಚಿತ್ರತಂಡ ಕೆಲವು ದಿನಗಳ ಹಿಂದೆ ಟ್ರೇಲರ್ ಬಿಡುಗಡೆ ಮಾಡುವುದರ ಜೊತೆಗೆ, ಬಿಡುಗಡೆ ದಿನಾಂಕವನ್ನೂ ಘೋಷಿಸಿತ್ತು. ಆದರೆ, ಚಿತ್ರ ಕಾರಣಾಂತರಗಳಿಂದ ಬಿಡುಗಡೆಯಾಗಲೇ ಇಲ್ಲ.
ಇದೀಗ ಚಿತ್ರದ ಹೊಸ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಅದರ ಪ್ರಕಾರ, ನವೆಂಬರ್.28ರಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಷ್ಟಕ್ಕೂ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಲು ಕಾರಣವೇನು? ಎಂಬ ಪ್ರಶ್ನೆ ಬರಬಹುದು. ಚಿತ್ರವನ್ನು ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆಯು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಕೃಷ್ಣ ಅಭಿನಯದ ‘ಬ್ರ್ಯಾಟ್’ ಚಿತ್ರವನ್ನೂ ಅದೇ ಸಂಸ್ಥೆ ಬಿಡುಗಡೆ ಮಾಡಬೇಕಿತ್ತು. ‘ಬ್ರ್ಯಾಟ್’ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ ಚಿತ್ರಮಂದಿರಗಳ ಸಮಸ್ಯೆ ಎದುರಾಗಬಾರದು ಎಂದು ‘ಫ್ಲರ್ಟ್’ ಮುಂದಕ್ಕೆ ಹೋಗಿದ್ದಾನೆ.
ಇದನ್ನು ಓದಿ: ಕುಂಭನಾದ ಪೃಥ್ವಿರಾಜ್: ಮಹೇಶ್ ಬಾಬುಗೆ ವಿಲನ್
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ಚಂದನ್ ಕುಮಾರ್, ‘ಫ್ಲರ್ಟ್’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಚಿತ್ರದ ನಾಯಕನಾಗಿಯೂ ಅಭಿನಯಿಸಿದ್ದಾರೆ. ಎವರೆಸ್ಟ್ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರವನ್ನು ನಿರ್ಮಿಸಿದ್ದಾರೆ.
ಸಾಮಾನ್ಯವಾಗಿ ಪ್ರೇಮಿಗಳ ಮಧ್ಯೆ ಬ್ರೇಕಪ್ ಆದರೆ ಒಂದು ಹಾಡು ಇರುತ್ತದೆ. ಇದು ಸ್ನೇಹಿತರ ನಡುವೆ ಬ್ರೇಕಪ್ ಆದಾಗ ಬರುವ ಹಾಡು. ಈ ಹಾಡಿಗೆ ಚಂದನ್ ಸಾಹಿತ್ಯ ಬರೆದಿದ್ದು, ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಈ Friendship Anthemಗೆ ಸುದೀಪ್ ಧ್ವನಿಯಾಗಿದ್ದಾರೆ.
ಈ ಚಿತ್ರದಲ್ಲಿ ಚಂದನ್‍ಗೆ ನಿಮಿಕಾ ರತ್ನಾಕರ್ ಮತ್ತು ಅಕ್ಷತಾ ಬೋಪಣ್ಣ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅವಿನಾಶ್, ಗಿರೀಶ್ ಶಿವಣ್ಣ, ಶ್ರುತಿ, ಸಾಧು ಕೋಕಿಲ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ನಕುಲ್ ಅಭಯಂಕರ್ ಮತ್ತು ಜಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ ಈ ಚಿತ್ರಕ್ಕಿದೆ.





