Mysore
18
clear sky

Social Media

ಗುರುವಾರ, 22 ಜನವರಿ 2026
Light
Dark

ನವೆಂಬರ್.14ರಂದು ತೆರೆಮೇಲೆ ಫ್ಯಾಂಟಸಿ ‘ಗತವೈಭವ’

ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದಿರುವ ನಿರ್ದೇಶಕ ಸಿಂಪಲ್ ಸುನಿ ಅವರು, ಇದೇ ಮೊದಲ ಬಾರಿಗೆ ಫ್ಯಾಂಟಸಿ ಡ್ರಾಮಾ ಚಿತ್ರಕ್ಕೆ ಕೈ ಹಾಕಿದ್ದಾರೆ.

ಈ ಚಿತ್ರದ ಹೆಸರು ‘ಗತವೈಭವ’. ಯುವ ಪ್ರತಿಭೆ ದುಷ್ಯಂತ್ ನಾಯಕ ನಟನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಅವರೇ ಗತವೈಭವ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರದ ಟೀಸರ್ ಅತಿ ಹೆಚ್ಚು ವೀಕ್ಷಕರನ್ನು ಸೆಳೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಟೀಸರ್ ಲಾಂಚ್ ಬಳಿಕ ಮಾತನಾಡಿದ ಸಿಂಪಲ್ ಸುನಿ ಅವರು, ಗತವೈಭವ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ಪ್ರಾಜೆಕ್ಟ್. ನನ್ನ ಬ್ಯಾನರ್ ನಡಿ ಮಾಡಬೇಕು ಎಂದುಕೊಂಡ ಸಿನಿಮಾ. ದುಷ್ಯಂತ್ ಈ ಪ್ರಾಜೆಕ್ಟ್ ಮಾಡ ಬೇಕು ಎಂಬ ಆಶಯದಲ್ಲೇ ಈ ಸಿನಿಮಾ ಆಗಿದೆ. ಈ ಚಿತ್ರ ರಿಲೀಸ್ ಆದ ಮೇಲೆ ಹೆಚ್ಚು ಪ್ರಚಾರ ಪಡೆಯುತ್ತದೆ. ನಾನು ಕೂಡ ಪ್ರೇಕ್ಷಕರ ರೀತಿ ಈ ಸಿನಿಮಾಗಾಗಿ ಕಾಯುತ್ತಿದ್ದೇನೆ. ಚಿತ್ರದಲ್ಲಿ ಪ್ರತಿ ಶಾರ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ದುಷ್ಯಂತ್ ನ್ಯಾಚುರಲ್ ಆರ್ಟಿಸ್ಟ್. ಆಶಿಕಾ ರಂಗನಾಥ್ ಕುಟುಂಬದ ಸದಸ್ಯರಂತೆ ಆಗಿದ್ದಾರೆ. ಈ ಸಿನಿಮಾದಲ್ಲಿ ಮನರಂಜನೆ, ಎಮೋಷನ್ ಎಲ್ಲವೂ ಇದೆ ಎಂದು ಹೇಳಿದರು.

ಚಿತ್ರದ ನಾಯಕ ನಟ ದುಷ್ಯಂತ್ ಮಾತನಾಡಿ, ನೂರು ದಿನಗಳಿಗೂ ಹೆಚ್ಚು ಕಾಲ ಶೂಟಿಂಗ್ ಮಾಡಿದ್ದೇವೆ. ಪೋರ್ಚುಗಲ್‌ನಲ್ಲಿ ಚಿತ್ರೀಕರಣ ಆಗಿದೆ. ನಿರೀಕ್ಷೆಗೂ ಮೀರಿ ಅದ್ಭುತವಾಗಿ ಚಿತ್ರ ಮೂಡಿಬಂದಿದೆ. ಸುನಿ ಸರ್ ಅವರ ಹತ್ತು ಸಿನಿಮಾಗಳಿಗಿಂತ ಇದು ಬೆಸ್ಟ್ ಸಿನಿಮಾವಾಗಲಿದೆ ಎಂದು ಸಿನಿಮಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

ಇನ್ನು ನಟಿ ಆಶಿಕಾ ರಂಗನಾಥ್ ಮಾತನಾಡಿ, ‘ಗತವೈಭವ’ ತುಂಬಾ ಸ್ಪೆಷಲ್ ಸಿನಿಮಾ. ಈ ರೀತಿಯ ಪಾತ್ರ ಸಿಗಲು ಕಲಾವಿದರು ಅದೃಷ್ಟ ಮಾಡಿರಬೇಕು. ನನಗೆ ಈ ಸಿನಿಮಾದಲ್ಲಿ ನಾಲ್ಕು ತರಹದ ಪಾತ್ರ ಇದೆ ಎಂದು ಚಿತ್ರದ ಬಗ್ಗೆ ಖುಷಿ ಹಂಚಿಕೊಂಡಿದ್ದರು.

‘ಗತವೈಭವ’ ಸಿನಿಮಾವನ್ನು ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಮಿಕ್ಸ್ ಮಾಡಿ ಮಾಡಲಾಗಿದೆ. ಹೀಗಾಗಿ ಇದು ಸಿಂಪಲ್ ಸುನಿ ಕರಿಯರ್‌ನ ವಿಭಿನ್ನ ಸಿನಿಮಾವಾಗಿದೆ. ಇನ್ನು ವಿಶೇಷವೆಂದರೆ ‘ಗತವೈಭವ’ ಚಿತ್ರಕ್ಕಾಗಿ ವಿಶೇಷವಾಗಿ ರೂಪಿಸಿರುವ ಶಿಪ್ ಸಾಂಗ್‌ಅನ್ನು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. ಹಾಡಿನ ಬಿಡುಗಡೆ ಜೊತೆಗೆ ಹಾಡಿಗೆ ವೇದಿಕೆ ಮೇಲೆಯೇ ಡ್ಯಾನ್ಸ್ ಮಾಡಿ ನೆರೆದಿದ್ದವರನ್ನು ರಂಜಿಸಿದರು.

ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ. ಸಿನಿಮಾದ ಟೀಸರ್, ಹಾಡುಗಳಾದ ವರ್ಣಮಾಲೆ ಹಾಗೂ ಶಿಪ್ ಹಾಡುಗಳು ಈಗಾಗಲೇ ಬಿಡುಗಡೆ ಆಗಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇದೇ ತಿಂಗಳ ೧೪ರಂದು ಗತವೈಭವ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ದೂಳೆಬ್ಬಿಸಲಿದೆ.

Tags:
error: Content is protected !!