‘ದುನಿಯಾ’ ವಿಜಯ್ ಅಭಿನಯದ ‘ಭೀಮ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವಾರ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಮತ್ತು ‘ಗೌರಿ’ ಚಿತ್ರಗಳೆರಡೂ ಬಿಡುಗಡೆಯಾಗುತ್ತಿದ್ದರೂ, ತನ್ನ ಚಿತ್ರಮಂದಿರಗಳನ್ನು ಉಳಿಸಿಕೊಂಡಿದೆ. ಈ ಮಧ್ಯೆ, ವಿಜಯ್ ಅಭಿನಯದ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಸಹಜ.
‘ಭೀಮ’ ಚಿತ್ರದ ಕೊನೆಯಲ್ಲಿ ಒಂದು ಟ್ವಿಸ್ಟ್ ಇದೆ. ಜೈಲಿನಿಂದ ವಿಜಯ್ ಬರುವುದನ್ನು ತೋರಿಸಲಾಗುತ್ತದೆ. ಅದು ‘ಭೀಮ’ ಚಿತ್ರದ ಮುಂದುವರೆದ ಭಾಗ ಎಂದು ಕೆಲವರು ಹೇಳಿದರೆ, ‘ಸಲಗ’ ಚಿತ್ರದ ಹಿನ್ನೆಲೆ ಸಂಗೀತ ಬರುವುದರಿಂದ, ಅದು ‘ಸಲಗ 2’ ಎಂದು ಹೇಳುತ್ತಿದ್ದಾರೆ.
ಇಷ್ಟಕ್ಕೂ ‘ದುನಿಯಾ’ ವಿಜಯ್ ಮುಂದಿನ ಚಿತ್ರ ಯಾವುದು ಎಂದರೆ, ‘ಭೀಮ 2’ ಅಲ್ಲ, ಹಾಗೆಯೇ ‘ಸಲಗ 2’ ಸಹ ಅಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ‘ನನ್ನನ್ನು ನಂಬಿ ಕೆಲವು ಹುಡುಗರ ಈ ಕ್ಷೇತ್ರಕ್ಕೆ ಬಂದಿದ್ದಾರೆ. ತಂಬಿ, ವೀರ, ಮೌರ್ಯ, ಡೆನ್ನಿಸ್, ಜೀವನ್ ಇವರೆಲ್ಲಾ ನನಗೆ ಅಣ್ಣನ ಸ್ಥಾನ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ‘ಸಲಗ 2’ ಚಿತ್ರವನ್ನು ಯಾವತ್ತು ಬೇಕಾದರೂ ಮಾಡಬಹುದು. ಏಕೆಂದರೆ, ಅದು ನನ್ನ ಕೈಯಲ್ಲಿರುವ ಕಥೆ. ನನ್ನ ನಂಬಿ ಬಂದವರು ಎರಡ್ಮೂರು ವರ್ಷಗಳಿಂದ ಕಾಯುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು. ಅವರಿಗೆ ಮೊದಲು ಸಿನಿಮಾ ಮಾಡುತ್ತೇನೆ. ಮೊದಲು ತಂಬಿ, ನಂತರ ವೀರನಿಗೆ ಸಿನಿಮಾ ಮಾಡುತ್ತೇನೆ. ಮೌರ್ಯನಿಗೂ ಕಥೆ ಬರೆಯೋಕೆ ಹೇಳಿದ್ದೇನೆ. ಒಂದಾದ ಮೇಲೊಂದು ಸಿನಿಮಾ ಮಾಡುತ್ತೇನೆ’ ಎನ್ನುತ್ತಾರೆ.
ಇನ್ನು, ಈ ಚಿತ್ರವನ್ನು ಅವರು ಬೇರೆ ನಿರ್ಮಾಪಕರಿಗೆ ಮಾಡಿಕೊಡುತ್ತಾರಂತೆ. ಒಬ್ಬರ ಜೊತೆಗೆ ಮೇಲಿಂದ ಮೇಲೆ ಕೆಲಸ ಮಾಡುವ ಬದಲು, ಬೇರೆಯವರ ಜೊತೆಗೆ ಕೆಲಸ ಮಾಡುವಾಸೆ ಇದೆ. ಈ ನಿರ್ಮಾಪಕರೂ ಒಂದು ಗ್ಯಾಪ್ ತೆಗೆದುಕೊಳ್ಳಲಿ, ನಾನು ಸಹ ಗ್ಯಾಪ್ ತೆಗೆದುಕೊಳ್ಳುತ್ತೇನೆ. ತುಂಬಾ ಹೊತ್ತು ಇದ್ದರೆ, ಜಗಳಗಳಾಗುತ್ತವೆ. ಹಾಗಾಗಿ, ಸಣ್ಣ ಗ್ಯಾಪ್ ತೆಗೆದುಕೊಳ್ಳುತ್ತೇವೆ. ಅವರ ತರಹ ಟೇಸ್ಟ್ ಮತ್ತ ಪ್ಯಾಶನ್ ಇರುವ ನಿರ್ಮಾಪಕರು. ಅಂತ ನಿರ್ಮಾಪಕರಿಗೆ ಕಾಯುತ್ತಿದ್ದೇನೆ. ಸದ್ಯದಲ್ಲೇ ತಂಬಿಯ ಚಿತ್ರವನ್ನು ಘೋಷಿಸುತ್ತೇನೆ. ನಮ್ಮ ಸ್ಟೈಲ್‍ಗೆ ಹೊಂದುವವರ ಜೊತೆಗೆ ಚಿತ್ರ ಮಾಡುತ್ತೇನೆ. ಆ ತರಹ ನಿರ್ಮಾಪಕರು ಬೇಕು’ ಎನ್ನುತ್ತಾರೆ.





