ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುತ್ತಾ ಬಂದಿದ್ದು, ಚಿತ್ರದ ಬಿಡುಗಡೆಯಲ್ಲಿ ಒಂದು ಸಣ್ಣ ಬದಲಾವಣೆ ಆಗಿದೆ. ಚಿತ್ರವು ಡಿ.12ರಂದು ಬಿಡುಗಡೆ ಆಗಲಿದೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಇದೀಗ ಚಿತ್ರವು ಒಂದು ದಿನ ಮೊದಲೇ ಬಿಡುಗಡೆ ಆಗಲಿದೆ.
ಇತ್ತೀಚೆಗೆ ‘ದಿ ಡೆವಿಲ್’ ಚಿತ್ರತಂಡದವರು ದರ್ಶನ್ ಅಭಿಮಾನಿಗಳ ಜೊತೆಗೆ ಒಂದು ಸಭೆ ನಡೆಸಿದರು. ಈ ಸಭೆಯಲ್ಲಿ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಪ್ರಕಾಶ್ ವೀರ್ ಜೊತೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ದರ್ಶನ್ ಅವರ ನೂರಾರು ಅಭಿಮಾನಿಗಳು ಭಾಗಿಯಾಗಿದ್ದರು.
ಇದನ್ನು ಓದಿ: ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಡಿಸೆಂಬರ್.11ರಂದೇ ಡೆವಿಲ್ ಬಿಡುಗಡೆ
ಈ ಸಭೆಯಲ್ಲಿ ಅಭಿಮಾನಿಗಳ ಅಭಿಪ್ರಾಯದ ಮೇರೆಗೆ ಚಿತ್ರವನ್ನು ಒಂದು ದಿನ ಮೊದಲು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದೆ. ಡಿ.12ರ ಬದಲು ಡಿ.11ರ ಗುರುವಾರದಂದು ಬಿಡುಗಡೆ ಆಗುತ್ತಿದೆ. ಈ ವಿಷಯವನ್ನು ಚಿತ್ರ ನಿರ್ಮಾಣ ಸಂಸ್ಥೆಯಾದ ಶ್ರೀ ಜೈಮಾತಾ ಕಂಬೈನ್ಸ್, ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದೆ.
ಶ್ರೀ ಜೈಮಾತಾ ಕಂಬೈನ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ‘ದಿ ಡೆವಿಲ್’ ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಮಿಕ್ಕಂತೆ ತುಳಸಿ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು , ಶೋಭರಾಜ್ ಮುಂತಾದವರು ನಟಿಸಿದ್ದಾರೆ.
‘ದಿ ಡೆವಿಲ್’ ಚಿತ್ರಕ್ಕೆ ಸುಧಾಕರ್ ಎಸ್. ರಾಜ್ ಛಾಯಾಗ್ರಹಣ ಮತ್ತ ಅಜನೀಶ್ ಲೋಕನಾಥ್ ಸಂಗೀತವಿದೆ.





