ಒಂದು ವಾರದ ಹಿಂದಷ್ಟೇ, ತಮಿಳು ಚಿತ್ರರಂಗದ ಜನಪ್ರಿಯ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಹೊಸ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಕಮಲ್ ಹಾಸನ್ ನಿರ್ಮಾಣದ ಈ ಚಿತ್ರವನ್ನು ಸುಂದರ್ ಸಿ ನಿರ್ದೇಶಿಸಬೇಕಿತ್ತು. ಸ್ವತಃ ಕಮಲ್ ಹಾಸನ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಇದೀಗ ಈ ಚಿತ್ರತಂಡದಿಂದ ಸುಂದರ್ ಹೊರಬಂದಿದ್ದಾರೆ.
ಹೌದು, ‘ತಲೈವರ್ 173’ ಚಿತ್ರವನ್ನು ನಿರ್ದೇಶಿಸಬೇಕಿದ್ದ ಸುಂದರ್ ಸಿ, ಆ ಚಿತ್ರ ಶುರುವಾಗುವ ಮೊದಲೇ ಅದರಿಂದ ಹೊರಬಂದಿದ್ದಾರೆ. ಅನಿವಾರ್ಯ ಕಾರಣಗಳಿಂದ ಚಿತ್ರದಿಂದ ಹೊರಬರಬೇಕಾಯಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಅಲ್ಲಿಗೆ ರಜನಿಕಾಂತ್ ಅಭಿನಯದ ಚಿತ್ರ ಶುರುವಾಗುವ ಮೊದಲೇ ವಿವಾದಕ್ಕೀಡಾಗಿದೆ.
ಇದನ್ನು ಓದಿ: ನವೆಂಬರ್.14ರಂದು ತೆರೆಮೇಲೆ ಫ್ಯಾಂಟಸಿ ‘ಗತವೈಭವ’
ಹಾಗೆ ನೋಡಿದರೆ, ಈ ಚಿತ್ರದಿಂದ ನಿರ್ದೇಶಕರು ಹೊರಬರುತ್ತಿರುವುದು ಹೊಸದೇನಲ್ಲ. ಮೊದಲಿಗೆ ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ನಂತರ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಕೊನೆಗೆ ಅವರಿಬ್ಬರನ್ನೂ ಬಿಟ್ಟು, ಸುಂದರ್ ಸಿ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂದು ಹೇಳಲಾಯಿತು.
ನಟಿ-ರಾಜಕಾರಣಿ ಖುಷ್ಬೂ ಅವರ ಪತಿಯಾಗಿರುವ ಸುಂದರ್, ಈ ಹಿಂದೆ ರಜನಿಕಾಂತ್ ಅಭಿನಯದಲ್ಲಿ ‘ಅರುಣಾಚಲಂ’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ 1997ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಇದೀಗ 28 ವರ್ಷಗಳ ನಂತರ ರಜನಿಕಾಂತ್ ಅಭಿನಯದಲ್ಲಿ ಸುಂದರ್ ಹೊಸ ಚಿತ್ರ ಅವರು ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ತಣ್ಣಗಾಗುವ ಮೊದಲೇ ಅವರು ಈ ಚಿತ್ರದಿಂದ ಹೊರಬರುತ್ತಿದ್ದಾರೆ. ಅವರ ಬದಲು ಈ ಚಿತ್ರವನ್ನು ಯಾರು ನಿರ್ದೇಶಿಸಬಹುದು ಎಂಬ ಪ್ರಶ್ನೆ ಕೇಳಿ ಬರುತ್ತಿದ್ದು, ಈ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಈ ಚಿತ್ರವನ್ನು ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆಯಾದ ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಮೂಲಕ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಹಿಂದೆ ರಾಜ್ ಕಮಲ್ ಸಂಸ್ಥೆಯು ಕಮಲ್ ಹಾಸನ್ ಸೇರಿದಂತೆ ತಮಿಳು ಚಿತ್ರರಂಗದ ಹಲವು ಜನಪ್ರಿಯ ನಟರ ಚಿತ್ರಗಳನ್ನು ನಿರ್ಮಿಸಿತ್ತು. ಇದೇ ಮೊದಲ ಬಾರಿಗೆ ರಜನಿಕಾಂತ್ ಅಭಿನಯದ ಚಿತ್ರವನ್ನು ರಾಜ್ ಕಮಲ್ ನಿರ್ಮಿಸುತ್ತಿದೆ.





