Mysore
19
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ಕಾಮಿಡಿ ನಟ ಈಗ ವಿಲನ್‍; ಹೇಗಿದ್ದ ಹೇಗಾದ ಮಿತ್ರ!

ಪ್ರಜ್ವಲ್‍ ಅಭಿನಯದ ‘ಕರಾವಳಿ’ ಚಿತ್ರದಲ್ಲಿ ಮಿತ್ರ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಇದುವರೆಗೂ ಮಾಡದ ಒಂದು ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎಂದು ಚಿತ್ರತಂಡದವರು ಆರಂಭದಿಂದ ಹೇಳುತ್ತಲೇ ಇದ್ದರು. ಆದರೆ, ಮಿತ್ರ ಪಾತ್ರವೇನು ಎಂಬುದನ್ನು ಬಹಿರಂಗ ಮಾಡಿರಲಿಲ್ಲ.

ಇದೀಗ ಮಿತ್ರ ಪಾತ್ರ ಬಹಿರಂಗವಾಗಿದ್ದು, ಅವರು ಈ ಚಿತ್ರದಲ್ಲಿ ವಿಲನ್‍ ಆಗಿ ನಟಿಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಅವರು ಮಹಾಬಲ ಎಂಬ ವಿಲನ್ ಆಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕಾಗಿ ತಮ್ಮ ಲುಕ್ ಸಹ ಬದಲಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, 60 ವಯಸ್ಸಿನ ವ್ಯಕ್ತಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದು, ಅದಕ್ಕಾಗಿ ತೂಕವನ್ನೂ ಇಳಿಸಿದ್ದಾರೆ. ಈ ಚಿತ್ರಕ್ಕಾಗಿ ಮೊದಲ ಬಾರಿಗೆ ಅವರು ಗಡ್ಡ ಬಿಟ್ಟಿದ್ದಾರೆ.

ಕಲಾವಿದರಾದವರು ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು ಮತ್ತು ವಯಸ್ಸಿಗೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಎಂಬುದು ಮಿತ್ರ ಅಭಿಪ್ರಾಯ. ಅದೇ ಕಾರಣಕ್ಕೆ ಕಾಮಿಡಿ ಪಾತ್ರಗಳಿಗೆ ಅವರು ಫುಲ್‍ಸ್ಟಾಪ್‍ ಹಾಕಿ, ಬೇರೆ ತರಹದ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಅದಕ್ಕೆ ಸರಿಯಾಗಿ, ‘ಕರಾವಳಿ’ ಚಿತ್ರದಲ್ಲೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಮುಂದೆ ಸಹ ವಿಭಿನ್ನ ಪಾತ್ರಗಳ ಹುಡುಕಾಟದಲ್ಲಿ ಅವರಿದ್ದಾರೆ.

‘ಕರಾವಳಿ’ ನಂತರ ಮಿತ್ರ ಅವರನ್ನು ಹಲವರು ವಿಲನ್‍ ಪಾತ್ರಗಳಿಗಾಗಿ ಹುಡುಕಿಕೊಂಡು ಬರುತ್ತಿದ್ದಾರಂತೆ. ಇದೇ ಕಾರಣಕ್ಕೆ ಮಿತ್ರ ಹೊಸದಾಗಿ ಫೋಟೋಶೂಟ್‍ ಸಹ ಮಾಡಿಸಿದ್ದಾರೆ. ‘ಕರಾವಳಿ’ ಚಿತ್ರದ ಛಾಯಾಗ್ರಾಹಕ ಅಭಿಮನ್ಯು ಸದಾನಂದನ್‍, ಮಿತ್ರ ಅವರ ಹೊಸ ಫೋಟೋಶೂಟ್‍ ಮಾಡಿಕೊಟ್ಟಿದ್ದಾರೆ.

‘ಕರಾವಳಿ’ ಚಿತ್ರಕ್ಕೆ ಚಂದ್ರಶೇಖರ್‍ ಬಂಡಿಯಪ್ಪ ಕಥೆ-ಚಿತ್ರಕಥೆ ಬರೆದಿದ್ದು, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಇದು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಬಂಧದ ಕುರಿತಾದ ಚಿತ್ರ. ಚಿತ್ರದಲ್ಲಿ ಪ್ರಜ್ವಲ್‍ಗೆ ನಾಯಕಿಯಾಗಿ ಸಂಪದ ಹುಲಿವಾನ ನಟಿಸುತ್ತಿದ್ದು, ಮಿಕ್ಕಂತೆ ಮಿತ್ರ, ‘ಸಿದ್ಲಿಂಗು’ ಶ್ರೀಧರ್‍, ಗೋವಿಂದೇಗೌಡ, ವಿದ್ಯಾ ಮೂರ್ತಿ ಮುಂತಾದವರು ನಟಿಸುತ್ತಿದ್ದಾರೆ.

ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.

Tags:
error: Content is protected !!