ಚಂದನ್ ಶೆಟ್ಟಿ (Chandan Shetty) ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವು ಕಳೆದ ವರ್ಷ ಬಿಡುಗಡೆಯಾದರೂ, ಅಷ್ಟೇನೂ ಸದ್ದು ಮಾಡಲಿಲ್ಲ. ಇದೀಗ ಅವರು ಹೊಸ ಚಿತ್ರವೊಂದರ ಮೂಲಕ ಬರಲು ಸಜ್ಜಾಗಿದ್ದಾರೆ.
ಚಂದನ್ ಹೊಸ ಚಿತ್ರ ‘ಸೂತ್ರಧಾರಿ’. ಸುಮಾರು ಎರಡು ವರ್ಷಗಳ ಹಿಂದೆಯೇ ಚಿತ್ರ ಪ್ರಾರಂಭವಾಗಿತ್ತು. ಚಿತ್ರೀಕರಣ ಸಹ ಮುಗಿದಿತ್ತು. ಈಗ ಚಿತ್ರದ ಸೆನ್ಸಾರ್ ಆಗಿದ್ದು, ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರವನ್ನು ನೀಡಿದೆ. ಈಗಾಗಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಚಿತ್ರವು ಮೇ 09ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ದಕ್ಷಿಣ ಭಾರತದಲ್ಲಿ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಸಾಕಷ್ಟು ಇವೆಂಟ್‍ಗಳನ್ನು ನಡೆಸುತ್ತಿರುವ ಹಾಗೂ ಇತ್ತೀಚೆಗೆ ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್ ಆಯೋಜಿಸಿದ್ದ ನಟ-ನಿರ್ಮಾಪಕ ನವರಸನ್ ತಮ್ಮ ಈಗಲ್ ಮೀಡಿಯಾ ಕ್ರಿಯೇಷನ್ಸ್ ಲಾಂಛನದಲ್ಲಿ ‘ಸೂತ್ರಧಾರಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಿರಣ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:– ನಿರಂಜನ್ ಸುಧೀಂದ್ರ ಜೊತೆಗೆ ‘ನೆನಪಿರಲಿ’ ಪ್ರೇಮ್; ʼಸ್ಪಾರ್ಕ್ʼಗೆ ಹೊಸ ಸೇರ್ಪಡೆ
ನಾಯಕನಾಗಿ ಇದು ಮೊದಲ ಸಿನಿಮಾ ಎನ್ನುವ ಚಂದನ್ ಶೆಟ್ಟಿ, ‘ನನ್ನ ಪಾತ್ರ ಬಹಳ ಚೆನ್ನಾಗಿದೆ. ಈ ಚಿತ್ರದಲ್ಲಿ ನಟಿಸಿದ ನಂತರ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈಗ ನಾನು ಬಹಳ ದಿನಗಳಿಂದ ಕಾಯುತ್ತಿದ್ದ ‘ಸೂತ್ರಧಾರಿ’ ಚಿತ್ರವು ಮೇ 9 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಮಿಲಿಯನ್‍ಗಟ್ಟಲೆ ವೀಕ್ಷಣೆಯಾಗಿ ಟ್ರೆಂಡಿಂಗ್ ನಲ್ಲಿದೆ’ ಎನ್ನುತ್ತಾರೆ.
ಇದನ್ನೂ ಓದಿ:- ‘ಟಕೀಲಾ’ ಹಾಡಿಗೆ ಧ್ವನಿಯಾದ ಶರಣ್; ಸದ್ಯದಲ್ಲೇ ಹಾಡು ಬಿಡುಗಡೆ
‘ಸೂತ್ರಧಾರಿ’ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದು, ‘ಡ್ಯಾಶ್’ ಹಾಡು ಸಾಕಷ್ಟು ಜನಪ್ರಿಯವಾಗಿದೆ. ಚಂದನ್ ಶೆಟ್ಟಿಗೆ ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ. ಸಂಜನಾ ಆನಂದ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ತಬಲ ನಾಣಿ, ಪ್ರಶಾಂತ್ ನಟನ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣವಿದೆ.





