ಹೀರೋಗಳ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದು ಹೊಸ ವಿಷಯವಲ್ಲ. ಕೆಲವು ವರ್ಷಗಳ ಹಿಂದೆ ಹೀರೋಗಳು ವರ್ಷಕ್ಕೆ ಎಂಟ್ಹತ್ತು ಸಿನಿಮಾ ಮಾಡುವಾಗ, ಇದು ಸಾಮಾನ್ಯವಾಗಿತ್ತು. ಒಬ್ಬ ಹೀರೋನ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದು ಸಹಜವಾಗಿತ್ತ. ಇತ್ತೀಚಿನ ವರ್ಷಗಳಲ್ಲಿ ಇವೆಲ್ಲಾ ಕಡಿಮೆಯಾಗಿದೆ. ಹೀಗಿರುವಾಗಲೇ, ನಟಿ ಬೃಂದಾ ಆಚಾರ್ಯ ಅಭಿನಯದ ಎರಡು ಚಿತ್ರಗಳು ನವೆಂಬರ್ 21ರಂದು ಬಿಡುಗಡೆಯಾಗಲಿವೆ.
ಇತ್ತೀಚೆಗೆ, ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಚಿತ್ರದ ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿರುವ ಅವರು, ‘ಸಾಮಾನ್ಯವಾಗಿ ನಿಮಗೆ ಯಾರು ಸ್ಪರ್ಧೆ ಅಂತ ಕೇಳಿದರೆ, ನನಗೆ ನಾನೇ ಕಾಂಪಿಟೇಶನ್ ಅಂತ ಹೇಳುತ್ತಿದ್ದೆ. ನಾನು ಬೇರೆಯವರ ಜೊತೆಗೆ ಸ್ಪರ್ಧೆ ಮಾಡುವುದಿಲ್ಲ, ನನ್ನ ಜೊತೆಗೆ ಸ್ಪರ್ಧೆ ಮಾಡಿಕೊಳ್ಳುತ್ತೇನೆ. ಅದು ನಿಜವಾಗುತ್ತಿದೆ. ನವೆಂಬರ್ 21ರಂದು ನನ್ನ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದು ‘ಮಾರುತ’. ಇನ್ನೊಂದು ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’. ಎರಡು ಬೇರೆಬೇರೆ ರೀತಿಯ ಸಿನಿಮಾಗಳು ಮತ್ತು ಪಾತ್ರಗಳು’ ಎನ್ನುತ್ತಾರೆ.
ಇದನ್ನು ಓದಿ: 2026ರ ಸಂಕ್ರಾಂತಿಗೆ ಬರಲಿದ್ದಾನೆ ‘ಮ್ಯಾಂಗೋ ಪಚ್ಚ’
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರವು ಜನರಿಗೆ ಬಹಳ ಇಷ್ಟವಾಗುತ್ತದೆ ಎಂದು ನಂಬಿರುವ ಬೃಂದಾ, ‘ಇದರಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಜನರಿಗೆ ಔಟ್ ಆಫ್ ದಿ ಬಾಕ್ಸ್ ಏನೋ ಸಿಗುತ್ತದೆ ಎಂಬ ನಂಬಿಕೆಯಿಂದ ಒಪ್ಪಿಕೊಂಡಿರುವ ಚಿತ್ರವಿದು. ಚಿತ್ರ ನೋಡಿದ ಮೇಲೆ, ಅದು ನಿಜ ಎಂದನಿಸಿತು. ಮೊದಲ ಮೀಟಿಂಗ್‍ನಲ್ಲಿ ನಿರ್ದೇಶಕರು ಒಂದು ಗಂಟೆ ತಡವಾಗಿ ಬಂದರು. ಆಗಲೇ ಅವರ ಜೊತೆಗೆ ಕೆಲಸ ಮಾಡದಿರುವುದಕ್ಕೆ ತೀರ್ಮಾನಿಸಿದ್ದೆ. ಆದರೆ, ಕಥೆ ಕೇಳಿದಾಗ, ಚಿತ್ರ ಮಾಡಬೇಕೆಂದು ತೀರ್ಮಾನಿಸಿದೆ. ಇನ್ನು, ಅವರು ಮಾಡಿದ ಟೀಸರ್ ನೋಡಿದ ಮೇಲೆ ತೀರ್ಮಾನ ಇನ್ನಷ್ಟು ಗಟ್ಟಿಯಾಗಿದೆ’ ಎನ್ನುತ್ತಾರೆ.
ಇದು ತಮ್ಮ ವೃತ್ತಿಜೀವನದ ಇದುವರೆಗೀನ ಬೆಸ್ಟ್ ಚಿತ್ರ ಮತ್ತು ಪಾತ್ರವಾಗಲಿದೆ ಎನ್ನುವ ಬೃಂದಾ, ‘ನಿರ್ದೇಶಕರು ತಾಳ್ಮೆಯಿಂದ ಕೆಲಸ ಮಾಡುತ್ತಾರೆ. ಅವರು ಹಾಗೆ ಕೆಲಸ ಮಾಡುವುದರಿಂದಲೇ, ನಮಗೂ ಅತ್ಯುತ್ತಮ ಕೊಡುವುದಕ್ಕೆ ಸಾಧ್ಯವಾಯಿತು. ದೀಕ್ಷಿತ್ ಕೆಲಸದ ಬಗ್ಗೆ ಮಾತನಾಡಬೇಕೆಂದರೆ ಟಿಪ್ಪಣಿ ಬರಬೇಕು. ಅವರ ಜೊತೆಗೆ ಕೆಲಸ ಮಾಡಿದ ಮೇಲೆ, ಯಾಕೆ ಎಲ್ಲರೂ ಅವರನ್ನು ಹೊಗಳುತ್ತಾರೆ ಎಂದು ಗೊತ್ತಾಯಿತು’ ಎಂದು ಹೇಳಿದರು.
‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಎದುರು ಬೃಂದಾ ನಟಿಸಿದರೆ, ‘ಮಾರುತ’ ಚಿತ್ರದಲ್ಲಿ ಶ್ರೇಯಸ್ ಮಂಜುಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.





