Mysore
25
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

‘ರಾವಣ ರಾಜ್ಯದಲ್ಲಿ ನವದಂಪತಿ’ಗಳು; ನಿರ್ಮಾಪಕರಾದ ‘ಬಡವ ರಾಸ್ಕಲ್’ ನಿರ್ದೇಶಕ

ಧನಂಜಯ್‍ ಅಭಿನಯದ ‘ಬಡವ ರಾಸ್ಕಲ್‍’ ಚಿತ್ರವನ್ನು ನಿರ್ದೇಶಿಸಿದ್ದ ಶಂಕರ್ ಗುರು, ಈಗ ಅದೇ ಧನಂಜಯ್‍ ಅಭಿನಯದಲ್ಲಿ ‘ಅಣ್ಣ ಫ್ರಮ್‍ ಮೆಕ್ಸಿಕೋ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮಧ್ಯೆ, ಅವರು ನಿರ್ಮಾಪಕರಾಗಿದ್ದಾರೆ.

ಶಂಕರ್‍ ಗುರು, ಇದೀಗ ಧೀರಜ್‍ ಎಂ.ವಿ ಹಾಗೂ ವರುಣ್ ಗುರುರಾಜ್ ‍ಜೊತೆಗೆ ಸೇರಿ ಸದ್ದಿಲ್ಲದೆ ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಎಂಬ ಚಿತ್ರ ನಿರ್ಮಿಸಿದ್ದಾರೆ. ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್ ನಡಿ ಚಿತ್ರ ನಿರ್ಮಾಣವಾಗಿದೆ. ಧೀರಜ್ ಹಾಗೂ ವರುಣ್ ಗುರುರಾಜ್ ಸಾಹಸಕ್ಕೆ ಶಂಕರ್ ಗುರು ನಿರ್ಮಾಪರಾಗಿ ಬೆಂಬಲ ನೀಡಿದ್ದಾರೆ.

‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಎಂಬ ಶೀರ್ಷಿಕೆಯೇ ಚಿತ್ರದ ಕಥೆ ಏನಿರಬಹುದು ಎಂಬ ಸೂಚನೆಯನ್ನು ಕೊಡುತ್ತದೆ. ಆದರೆ, ಚಿತ್ರತಂಡ ಚಿತ್ರದ ಬಗ್ಗೆ ಯಾವೊಂದು ಮಾಹಿತಿಯನ್ನೂ ಬಿಟ್ಟುಕೊಡುವುದಿಲ್ಲ. ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳು ಎಂದಷ್ಟೇ ಹೇಳಿಕೊಂಡಿದೆ.

ಅಂದಹಾಗೆ, ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಚಿತ್ರದ ಚಿತ್ರೀಕರಣ ಮುಗಿದಿದೆ. ಅರುಣ್ ಸೂರ್ಯ ಹಾಗೂ ‘ಡೊಳ್ಳು’, ‘ಶಾಖಾಹಾರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ರಂಗ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗುರು ಪ್ರಸಾದ್ ಹಾಗೂ ಸುನೀಲ್‍ ಕುಮಾರ್‍ ದೇಸಾಯಿ ಅವರ ಜೊತೆಗೆ ಕೆಲಸ ಕಲಿತಿರುವ ರಂಗ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಚಿತ್ರಕ್ಕೆ ಸದ್ದಿಲ್ಲದೆ ಚಿತ್ರೀಕರಣ ಮುಗಿದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮೊದಲ ಹಂತವಾಗಿ ಚಿತ್ರದ ಮೊದಲ ಪೋಸ್ಟರ್‍ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಅಭಿನಂದನ್ ಕಶ್ಯಪ್ ಸಂಗೀತ ಹಾಗೂ ವೀರೇಶ್‍ ಛಾಯಾಗ್ರಹಣವಿದೆ.

Tags: