2007ರಲ್ಲಿ ಬಿಡುಗಡೆಯಾದ ‘ಆ ದಿನಗಳು’ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ ಮತ್ತು ಅತುಲ್ ಕುಲಕರ್ಣಿ ಜೊತೆಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಡಾನ್ ಜಯರಾಜ್ ಪಾತ್ರದಲ್ಲಿ ನಟಿಸಿದರೆ, ‘ಅಗ್ನಿ’ ಶ್ರೀಧರ್ ಪಾತ್ರದಲ್ಲಿ ಅತುಲ್ ಕುಲಕರ್ಣಿ ನಟಿಸಿದ್ದರು. ಆ ಚಿತ್ರದ ನಂತರ ಅವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ.
ಈಗ ಬಹಳ ವರ್ಷಗಳ ನಂತರ ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದಾರೆ. ಆಶಿಶ್ ವಿದ್ಯಾರ್ಥಿ ಮತ್ತು ಅತುಲ್ ಕುಲಕರ್ಣಿ ಇಬ್ಬರೂ ಬಹುಭಾಷಾ ನಟರು. ಇಬ್ಬರೂ ಕನ್ನಡದವಲ್ಲದೆ ಬೇರೆ ಭಾಷೆಗಳಲ್ಲೂ ನಟಿಸಿದವರು. ಈಗ ಕನ್ನಡ ಚಿತ್ರದಲ್ಲಿ ಅವರಿಬ್ಬರೂ ಜೊತೆಯಾಗುತ್ತಿರುವುದು ವಿಶೇಷ.
‘ಆ ದಿನಗಳು’ ಚಿತ್ರವು ನೈಜ ಘಟನೆಗಳನ್ನಾಧರಿಸಿದ ಚಿತ್ರವಾಗಿತ್ತು. ಆದರೆ, ‘ಬಲರಾಮನ ದಿನಗಳು’ 80ರ ದಶಕದಲ್ಲಿ ನಡೆಯುವ ಒಂದು ಕಾಲ್ಪನಿಕ ಕಥೆಯಾಗಿದೆ. ಇದು ಸಹ ಒಂದು ರೌಡಿಸಂ ಕಥೆಯಾಗಿದ್ದು, ಯಾವುದೇ ನೈಜ ಘಟನೆಯನ್ನಾಧರಿಸಿದ ಒಂದು ಕಾಲ್ಪನಿಕ ಕಥೆಯಂತೆ. ಈ ಚಿತ್ರವು ಕಳೆದ ವರ್ಷವೇ ಘೋಷಣೆಯಾಗಿತ್ತು. ಇದೀಗ ಮೈಸೂರಿನಲ್ಲಿ ಸತತವಾಗಿ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಮುಗಿಯಲಿದೆ. ಇತ್ತೀಚೆಗೆ ನಡೆದ ಚಿತ್ರೀಕರಣದಲ್ಲಿ ಆಶಿಶ್ ವಿದ್ಯಾರ್ಥಿ ಮತ್ತು ಅತುಲ್ ಕುಲಕರ್ಣಿ ಇಬ್ಬರೂ ವಿನೋದ್ ಪ್ರಭಾಕರ್ ಜೊತೆಯಾಗಿ ನಟಿಸಿದ್ದಾರೆ.
ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ‘ಆ ದಿನಗಳು’ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶಿಸುತ್ತಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸುತ್ತಿದ್ದಾರೆ.
1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದು ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿರುವ ಮೊದಲ ಕನ್ನಡ ಚಿತ್ರವಾಗಿದೆ.