Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಶಾರೂಖ್‍ ಆಯ್ತು ಈಗ ಸಲ್ಮಾನ್‍ ಖಾನ್‍ಗೆ ಅಟ್ಲಿ ನಿರ್ದೇಶನ

ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ, ಬಾಲಿವುಡ್‍ ನಟ ಶಾರೂಖ್‍ ಖಾನ್‍ ಅಭಿನಯದಲ್ಲಿ ‘ಪಠಾನ್‍’ ಎಂಬ ಚಿತ್ರ ನಿರ್ದೇಶಿಸಿದ್ದು, ಆ ಚಿತ್ರ ದೊಡ್ಡ ಯಶಸ್ಸು ಪಡೆದಿದ್ದು, ಈಗ ಹಳೇ ಸುದ್ದಿ. ‘ಜವಾನ್‍’ ನಂತರ ಅಟ್ಲಿ ಮುಂದಿನ ನಡೆಯೇನು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅವರು ಇನ್ನೊಂದು ಹಿಂದಿ ಚಿತ್ರವನ್ನು ನಿರ್ದೇಶಿಸುತ್ತಾರೋ ಅಥವಾ ತಮಿಳಿನತ್ತ ವಾಪಸ್ಸು ಬರುತ್ತಾರೋ ಎಂಬ ಕುತೂಹಲ ಇತ್ತು.

ಆ ಕುತೂಹಲಕ್ಕೆ ಈಗ ಕೊನೆಗೂ ಉತ್ತರ ಸಿಕ್ಕಿದೆ. ಶಾರೂಖ್‍ ಖಾನ್‍ ನಂತರ ಇದೀಗ ಅಟ್ಲಿ, ಸಲ್ಮಾನ್ ಖಾನ್‍ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಮುಂದಾಗಿದ್ದಾರೆ. ವಿಶೇಷವೆಂದರೆ,, ಈ ಚಿತ್ರದಲ್ಲಿ ಕಮಲ್‍ ಹಾಸನ್‍ ಸಹ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಇದೊಂದು ಆ್ಯಕ್ಷನ್‍ ಚಿತ್ರವಾಗಿದ್ದು 2025ರ ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್‍ ಕೆಲಸಗಳು ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರತಂಡ ಇನ್ನಷ್ಟು ಮಾಹಿತಿ ನೀಡಲಿದೆ ಎಂದು ಹೇಳಲಾಗಿದೆ.

ಈ ಚಿತ್ರದ ಒಂದು ಸೆಟ್‍ಗೆ 15 ಕೋಟಿ ರೂ ಖರ್ಚು ಮಾಡಲಾಗುತ್ತಿದೆಯಂತೆ. ಚಿತ್ರದಲ್ಲಿ ಮುಂಬೈನ ಧಾರಾವಿ ಮತ್ತು ಮಾತುಂಗ ಪ್ರದೇಶಗಳ ನಿರ್ಮಾಣ ಮಾಡಲಾಗುತ್ತಿದ್ದು, ಆ ನಂತರ ಚಿತ್ರಕ್ಕಾಗಿ ಭವ್ಯ ಅರಮನೆಯ ಸೆಟ್‍ನ್ನು ಸಹ ಹಾಕಲಾಗುತ್ತದಂತೆ.

ಸದ್ಯ ಸಲ್ಮಾನ್‍ ಖಾನ್‍, ಎ.ಆರ್. ಮುರುಗದಾಸ್‍ ನಿರ್ದೇಶನದ ‘ಸಿಕಂದರ್‍’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವು ಮುಂದಿನ ಈದ್ ವೇಳೆಗೆ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಲ್ಮಾನ್‍ ಖಾನ್‍ಗೆ ನಾಯಕಿಯಾಗಿ ಕನ್ನಡದ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಮಿಕ್ಕಂತೆ ಸುನೀಲ್‍ ಶೆಟ್ಟಿ, ಸತ್ಯರಾಜ್‍, ಪ್ರತೀಕ್‍ ಬಬ್ಬರ್‍ ಮುಂತಾದವರು ನಟಿಸುತ್ತಿದ್ದಾರೆ.

Tags: