ಶಿವರಾಜಕುಮಾರ್ ಅಭಿನಯದ ‘ಜಗ ಮೆಚ್ಚಿದ ಹುಡುಗ’ ಚಿತ್ರವು ಮೈಸೂರಿನ ಚಾಮುಂಡಿ ಬೆಟ್ಟದ ಬೃಹತ್ ನಂದಿ ವಿಗ್ರಹದ ಎದುರು ಶುರುವಾಗಿತ್ತು. ಸುಮಾರು 32 ವರ್ಷಗಳ ನಂತರ ಪುನಃ ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ಅದೇ ನಂದಿ ದೇವಸ್ಥಾನದಲ್ಲಿ ಚಾಲನೆ ಸಿಕ್ಕಿರುವುದು ವಿಶೇಷ. ಈ ಚಿತ್ರಕ್ಕೆ ‘ಡ್ಯಾಡ್’ ಎಂದು ಹೆಸರಿಡಲಾಗಿದ್ದು, ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಆರಂಭ ಫಲಕ ತೋರಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಈ ಚಿತ್ರವನ್ನು ಮೈರಾ ಕ್ರಿಯೇಷನ್ಸ್ ಲಾಂಛನದಡಿ ಹರೀಶ್ ಪೆದ್ದಿ ನಿರ್ಮಿಸುತ್ತಿದ್ದಾರೆ. ಈ ಹಿಂದೆ ತೆಲುಗಿನಲ್ಲಿ ‘ಭಗವಂತ್ ಕೇಸರಿ’, ‘ಉಗ್ರಂ’, ‘ಟಕ್ ಜಗದೀಶ್’ ಮುಂತಾದ ಚಿತ್ರಗಳನ್ನು ಅವರು ನಿರ್ಮಿಸಿದ್ದರು. ನಿರ್ದೇಶಕ ಅನಿಲ್ ಕನ್ನೆಗಂಟಿ ಸಹ ತೆಲುಗು ಮೂಲದವರಾಗಿದ್ದು, ಅವರು ತೆಲುಗಿನಲ್ಲಿ ‘ಅಸಾಧ್ಯುಡು’, ‘ಮಿಸ್ಟರ್ ನೂಕಯ್ಯ’ ಮತ್ತು ‘ಹಿಡಿಂಬ’ ಚಿತ್ರಗಳನ್ನು ನಿರ್ದೇಶಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ-ಚಿತ್ರಕಥೆಯನ್ನೂ ಅವರೇ ರಚಿಸಿದ್ದಾರೆ.
ಇದೊಂದು ತಂದೆ ಸೆಂಟಿಮೆಂಟ್ ಚಿತ್ರವಾಗಿದ್ದು, ಸಾಕಷ್ಟು ಥ್ರಿಲ್ಲಿಂಗ್ ಅಂಶಗಳು ಇರಲಿವೆ. ಶಿವರಾಜಕುಮಾರ್ ಈ ಚಿತ್ರದಲ್ಲಿ ವೈದ್ಯನ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕಾಗಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
‘ಡ್ಯಾಡ್’ ಚಿತ್ರದಲ್ಲಿ ಶಿವರಾಜಕುಮಾರ್ ಜೊತೆಗೆ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಬಿ. ರಾಜಶೇಖರ್ ಛಾಯಾಗ್ರಹಣವಿರುವ ಈ ಚಿತ್ರ ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿದೆ.





