ಕೆಲವು ದಿನಗಳ ಹಿಂದೆ ಖ್ಯಾತ ನಟಿ ಮತ್ತು ನಿರೂಪಕಿಯಾದ ಅಪರ್ಣ ವಸ್ತಾರೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಪರ್ಣ ನಿಧನಕ್ಕೆ ಇಡೀ ರಾಜ್ಯವೇ ಸಂತಾಪ ಸೂಚಿಸಿದೆ. ಈ ಮಧ್ಯೆ, ‘ಗ್ರಾಮಾಯಣ’ ಚಿತ್ರದ ಕಥೆ ಏನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡ ಅಪರ್ಣ್, ಆ ನಂತರ ಕೆಲವು ಬೆರಳಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ವಿಜಯ್ ರಾಘವೇಂದ್ರ ಅಭಿನಯದ ‘ಗ್ರೇ ಗೇಮ್ಸ್’ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದಲ್ಲದೆ ವಿನಯ್ ರಾಜಕುಮಾರ್ ಅಭಿನಯದ ‘ಗ್ರಾಮಾಯಣ’ ಚಿತ್ರದಲ್ಲೂ ಅವರ ಹೆಸರಿದೆ. ಚಿತ್ರೀಕರಣ ಇನ್ನೂ ಪೂರ್ತಿಯಾಗಿ ಮುಗಿದಿಲ್ಲ. ಹೀಗಿರುವಾಗ, ಅವರ ನಿಧನದಿಂದ ಚಿತ್ರದ ಕಥೆಯೇನು? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.
ನಿರ್ದೇಶಕ ದೇವನೂರು ಚಂದ್ರು ಹೇಳುವಂತೆ, ಅಪರ್ಣ ಅವರು ತಮ್ಮ ಕೆಲಸವನ್ನು 2023ರಲ್ಲಿಯಾ ಮುಗಿಸಿದ್ದಾರಂತೆ. ಮಿಕ್ಕಂತೆ ಒಂದಿಷ್ಟು ಪ್ಯಾಚ್ ವರ್ಕ್ ಬಾಕಿ ಇದ್ದು, ಮುಂದೆ ನೋಡಿಕೊಂಡು ಅದನ್ನು ಚಿತ್ರೀಕರಿಸುವ ಯೋಚನೆಯಲ್ಲಿದ್ದರಂತೆ. ಆದರೆ, ಈಗಿರುವ ಫುಟೇಜ್ ಸಾಕಷ್ಟು ಇರುವುದರಿಂದ ಇನ್ನೇನು ಅವಶ್ಯಕತೆ ಇಲ್ಲ ಎಂಬುದು ಅವರ ಅಭಿಪ್ರಾಯ. ಮಿಕ್ಕಂತೆ ಅಪರ್ಣ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದು, ಇದೇ ಅವರ ಕೊನೆಯ ಚಿತ್ರವಾಗಿ ಹೋಯಿತು ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಅಪರ್ಣ ಅವರು ತಮ್ಮ ಧ್ವನಿಗಾಗಿ ಗುರುತಿಸಿಕೊಂಡವರು. ಅವರ ನಿಧನದಿಂದ ಅವರ ಪಾತ್ರಕ್ಕೆ ಬೇರೆ ಯಾರಾದರೂ ಡಬ್ ಮಾಡುತ್ತಾರಾ? ಎಂಬ ಪ್ರಶ್ನೆ ಬರಬಹುದು. ಹಾಗೇನಿಲ್ಲವಂತೆ. ಚಿತ್ರೀಕರ ಸಮಯದಲ್ಲಿ ರೆಕಾರ್ಡ್ ಆದ ಧ್ವನಿಯನ್ನೇ ಚಿತ್ರದಲ್ಲೂ ಬಳಸಿಕೊಳ್ಳಲಾಗುತ್ತದಂತೆ. ‘ಗ್ರಾಮಾಯಣ’ ಚಿತ್ರದಲ್ಲಿ ವಿನಯ್ ರಾಜಕುಮಾರ್ ಅವರ ತಾಯಿಯಾಗಿ ಅಪರ್ಣ ಕಾಣಿಸಿಕೊಂಡಿದ್ದು, ಸುಮಾರು 15 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ಇದುವರೆಗೂ ಕಾಣಿಸಿಕೊಳ್ಳದ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.
ವಿನಯ್ ರಾಜಕುಮಾರ್ ಅಭಿನಯದ ‘ಗ್ರಾಮಾಯಣ’ ಚಿತ್ರಕ್ಕೆ ಕಳೆದ ವರ್ಷ ಚಾಲನೆ ಸಿಕ್ಕಿತ್ತು. ಈಗಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣಿಸುತ್ತದೆ ಎನ್ನುವುದೇ ಗ್ರಾಮಾಯಣ ಚಿತ್ರದ ಕಥೆ. ಈ ಚಿತ್ರವನ್ನು ಮನೋಹರ್ ನಾಯ್ಡು ಮತ್ತು ಕೆ.ಪಿ. ಶ್ರೀಕಾಂತ್ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.
‘ಗ್ರಾಮಾಯಣ’ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ಗೆ ನಾಯಕಿಯಾಗಿ ಮೇಘಾ ಶೆಟ್ಟಿ ನಟಿಸುತ್ತಿದ್ದು, ಮಿಕ್ಕಂತೆ ಅಪರ್ಣ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ, ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯಶಸ್ವಿನಿ ಅಂಚಲ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.