Mysore
22
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇನ್ನೊಂದು ಬಯೋಪಿಕ್‍ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಈಗಾಗಲೇ ಕೆಲವು ವರ್ಷಗಳ ಹಿಂದೆ ಒಂದು ಬಯೋಪಿಕ್‍ ಚಿತ್ರ ಬಂದಿದ್ದು, ಆ ಚಿತ್ರದಲ್ಲಿ ನಟ ವಿವೇಕ್‍ ಒಬೆರಾಯ್‍, ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಓಮುಂಗ್‍ ಕುಮಾರ್ ನಿರ್ದೇಶನ ಮಾಡಿದ್ದರು. ಈಗ ಮೋದಿ ಅವರ ಕುರಿತು ಇನ್ನೊಂದು ಚಿತ್ರ ತಯಾರಾಗುತ್ತಿದೆ.

ಇಂದು‌ ನರೇಂದ್ರ ಮೋದಿ ಅವರ ಜನ್ಮದಿನ. ಅವರ ಹುಟ್ಟುಹಬ್ಬದ ಅಂಗವಾಗಿ ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಯು ‘ಮಾ ವಂದೇ’ ಎಂಬ ಚಿತ್ರ ಘೋಷಣೆ‌ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾವಾಗಿದೆ. ವೀರ್ ರೆಡ್ಡಿ ಎಂ. ನಿರ್ಮಿಸಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ನರೇಂದ್ರ ಮೋದಿಯವರ ಪಾತ್ರದಲ್ಲಿ ನಟಿಸಲಿದ್ದಾರೆ.

ಕ್ರಾಂತಿ ಕುಮಾರ್ ಸಿ.ಎಚ್.ನಿರ್ದೇಶಿಸಲಿರುವ ‘ಮಾ ವಂದೇ’ ಚಿತ್ರದಲ್ಲಿ ಚಿಕ್ಕ ಹುಡುಗನಿಂದ ಭಾರತದ ಪ್ರಧಾನಿಯಾಗುವವರೆಗಿನ ಮೋದಿಯವರ ಪ್ರಯಾಣವನ್ನು ಕಟ್ಟಿಕೊಡಲಾಗುವುದು. ಈ ಚಿತ್ರವು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಮತ್ತು ಸತ್ಯ ಘಟನೆಗಳ ಆಧಾರದ ಮೇಲೆ ಚಿತ್ರ‌ ಮೂಡಿ ಬರಲಿದೆ.

ಇದನ್ನು ಓದಿ: ‘ಗೆರಿಲ್ಲಾ WAR’ ಚಿತ್ರಕ್ಕೆ ಉಪೇಂದ್ರ ನಾಯಕ: ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ

ಈ ಕುರಿತು ಮಾತನಾಡಿರುವ ನಿರ್ಮಾಪಕ ವೀರ್ ರೆಡ್ಡಿ, ‘ಈ ಚಿತ್ರವು ಮೋದಿ ಅವರ ವೈಯಕ್ತಿಕ ಮತ್ತು ರಾಜಕೀಯ ಪ್ರಯಾಣದ ಘಟನೆಗಳು ಮತ್ತು ಮೈಲಿಗಲ್ಲುಗಳನ್ನು ಅಧಿಕೃತ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ‘ಮಾ ವಂದೇ’ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರವಾಗಿ ರೂಪಿಸಲಾಗುವುದು. ಭಾರತೀಯ ಭಾಷೆಗಳ ಜೊತೆಗೆ ಇಂಗ್ಲಿಷ್‌ನಲ್ಲಿ ನಿರ್ಮಿಸಲಾಗುವುದು. ಮೋದಿ ಮತ್ತು ಅವರ ತಾಯಿ ಹೀರಾಬೆನ್ ನಡುವಿನ ಬಾಂಧವ್ಯವನ್ನು ಚಿತ್ರದಲ್ಲಿ ಭಾವನಾತ್ಮಕವಾಗಿ ತೋರಿಸಲಾಗುವುದು’ ಎಂದು ಹೇಳಿದ್ದಾರೆ.

‘ಮಾ ವಂದೇ’ ಚಿತ್ರಕ್ಕೆ ‘ಬಾಹುಬಲಿ’ ಛಾಯಾಗ್ರಾಹಕ ಕೆ.ಕೆ.ಸೆಂಧಿಲ್‍ ಕುಮಾರ್‍ ಅವರ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಶ್ರೀಕರ ಪ್ರಸಾದ್ ಸಂಕಲನವಿದೆ. ಚಿತ್ರದಲ್ಲಿ ಉನ್ನಿ ಮುಕುಂದನ್‍ ಹೊರತುಪಡಿಸಿ, ಯಾವೆಲ್ಲಾ ಕಲಾವಿದರು ಇರಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಲಿದೆ.

Tags:
error: Content is protected !!