ನಟಿ ಅಂಕಿತಾ ಅಮರ್, ‘ಅಬ ಜಬ ದಬ’ ಮತ್ತು ‘ಜಸ್ಟ್ ಮ್ಯಾರೀಡ್’ ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಈ ಮಧ್ಯೆ, ಅವರು ‘ಭಾರ್ಗವ’ ಚಿತ್ರದಲ್ಲಿ ಉಪೇಂದ್ರ ಎದುರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ ‘ಇಬ್ಬನಿ ತಬ್ಬಿದ ಇಳೆಯಲಿ’ ಮತ್ತು ‘ಮೈ ಹೀರೋ’ ಚಿತ್ರಗಳಲ್ಲಿ ತಮ್ಮ ನಟನೆ ಮೂಲಕ ಗಮನ ಸೆಳೆದವರು ಕಿರುತೆರೆ ನಟಿ ಅಂಕಿತಾ ಅಮರ್. ಅದರಲ್ಲಿ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿನ ಅವರ ನಟನೆ ನೋಡಿ, ಅಂಕಿತಾಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗಬೇಕೆಂದು ಸ್ವತಃ ರಕ್ಷಿತ್ ಶೆಟ್ಟಿ ಹೇಳಿದ್ದರು. ಆದರೆ, ಆ ನಂತರ ಯಾವೊಂದು ಹೊಸ ಚಿತ್ರವನ್ನು ಅಂಕಿತಾ ಒಪ್ಪಿದ್ದ ಸುದ್ದಿ ಬಂದಿರಲಿಲ್ಲ. ಇದೀಗ ಭಾರ್ಗವ ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಉಪೇಂದ್ರ ಅಭಿನಯದ ಹೊಸ ಚಿತ್ರವು ಯುಗಾದಿ ಹಬ್ಬದಂದು ಘೋಷಣೆಯಾಗಿತ್ತು. ಆ ನಂತರ ಅಕ್ಷಯ ತೃತೀಯ ದಿನದಂದು ಚಿತ್ರಕ್ಕೆ ‘ಭಾರ್ಗವ’ ಎಂಬ ಹೆಸರನ್ನು ಇಡಲಾಗಿತ್ತು. A Violent Family Man ಎಂಬ ಅಡಿಬರಹವಿರುವ ಈ ಚಿತ್ರವನ್ನು ರಾಂಬಾಬು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ‘ಭಾರ್ಗವ’ ಚಿತ್ರವನ್ನು ‘ಸೂರಪ್ಪ’ ಬಾಬು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ರಾಜರತ್ನಂ ಅವರ ಛಾಯಾಗ್ರಹಣವಿದೆ.
2019ರಲ್ಲಿ ಬಿಡುಗಡೆಯಾದ ಗಣೇಶ್ ಅಭಿನಯದ ‘ಗಿಮಿಕ್’ ಚಿತ್ರದ ನಂತರ ನಾಗಣ್ಣ ಯಾವೊಂದು ಚಿತ್ರವನ್ನೂ ನಿರ್ದೇಶನ ಮಾಡಿರಲಿಲ್ಲ. ಆರು ವರ್ಷಗಳ ಗ್ಯಾಪ್‍ನ ನಂತರ ಅವರು ‘ಭಾರ್ಗವ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಉಪೇಂದ್ರ ಅಭಿನಯದಲ್ಲಿ ಅವರು ನಿರ್ದೇಶಿಸುತ್ತಿರುವ ಐದನೇ ಚಿತ್ರ ಇದು. ಇದಕ್ಕೂ ಮೊದಲು ‘ಗೌರಮ್ಮ’, ‘ಕುಟುಂಬ’, ‘ಗೋಕರ್ಣ’ ಮತ್ತು ‘ದುಬೈ ಬಾಬು’ ಚಿತ್ರಗಳಲ್ಲಿ ಉಪೇಂದ್ರ ಅವರನ್ನುಉ ನಾಗಣ್ಣ ನಿರ್ದೇಶನ ಮಾಡಿದ್ದರು.





