Mysore
20
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಮತ್ತೆ ನಿರ್ದೇಶಕರಾದ ಅನೀಶ್ ತೇಜೇಶ್ವರ್ ; ಹೊಸ ಚಿತ್ರಕ್ಕೆ ತಯಾರಿ

ಅನೀಶ್‍ ತೇಜೇಶ್ವರ್‍ ಅಭಿನಯದ ‘ಆರಾಮ್‍ ಅರವಿಂದಸ್ವಾಮಿ’ ಮತ್ತು ‘ಫಾರೆಸ್ಟ್’ ಚಿತ್ರಗಳು ಕೆಲವೇ ತಿಂಗಳುಗಳ ಅಂತರದಲ್ಲಿ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಒಂದಿಷ್ಟು ಒಳ್ಳೆಯ ಮಾತುಗಳು ಕೇಳಿ ಬಂದಿವೆಯಾದರೂ, ಚಿತ್ರ ದೊಡ್ಡ ಯಶಸ್ಸು ಕಾಣಲಿಲ್ಲ.

ಹೀಗಿರುವಾಗಲೇ, ಅನೀಶ್ ‍ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ಈ ಬಾರಿ ಅವರು ಬರೀ ನಟನಷ್ಟೇ ಅಲ್ಲ, ಚಿತ್ರದ ನಿರ್ದೇಶನವನ್ನು ಸಹ ಮಾಡಿದ್ದಾರೆ. 2021ರಲ್ಲಿ ಬಿಡುಗಡೆಯಾದ ‘ರಾಮಾರ್ಜುನ’ ಎಂಬ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ, ಆ ಚಿತ್ರವನ್ನು ನಿರ್ಮಿಸಿ, ಅದರಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಈಗ ಹೊಸ ಚಿತ್ರದಲ್ಲಿ ಅವರು ನಟನೆ ಮತ್ತು ನಿರ್ದೇಶನ ಎಂಬ ಎರಡು ಜವಾಬ್ದಾರಿಗಳನ್ನು ಹೊತ್ತಿದ್ದಾರೆ.

ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿರುವ ಅನೀಶ್‍, ‘’ಆರಾಮ್ ಅರವಿಂದಸ್ವಾಮಿ’ ನಂತರ, ನನ್ನ ಮುಂದಿನ ಹೆಜ್ಜೆಯನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ‘ರಾಮಾರ್ಜುನ’ ಚಿತ್ರದ ನಂತರ ನಾನು ಮತ್ತೆ ನಿರ್ದೇಶಿಸುತ್ತಿದ್ದು ಮತ್ತು ಈ ಬಾರಿ ಇನ್ನೂ ದೊಡ್ಡದಾಗಿ ಮತ್ತು ಉತ್ತಮವಾಗಿರಲಿದೆ. ನಿಮ್ಮ ನಿರೀಕ್ಷೆಗಳನ್ನು ತಲುಪಲು ನಮ್ಮ ತಂಡವು ಶ್ರಮಿಸುತ್ತಿದೆ. ನೀವು ನನ್ನನ್ನು ಮತ್ತೊಂದು ಭರವಸೆಯ ಮತ್ತು ವಿಶಿಷ್ಟ ಪಾತ್ರದಲ್ಲಿ ನೋಡುತ್ತೀರಿ ಎಂದು ಭಾವಿಸುತ್ತಾ, ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ನಾವು ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಶೀರ್ಷಿಕೆ, ತಾರಾಗಣ ಮತ್ತು ಇನ್ನಿತರ ವಿವರಗಳಿಗಾಗಿ ನಿರೀಕ್ಷಿಸಿ. ಚಿತ್ರೀಕರಣ ಪ್ರಾರಂಭವಾಗಿದೆ ಮತ್ತು ಶೀಘ್ರದಲ್ಲೇ ಹೆಚ್ಚಿನ ವಿವರಗಳು ಬರಲಿವೆ’ ಎಂದು ಅನೀಶ್‍ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ನಲ್ಲಿ ಅನೀಶ್‍ ಒಂದು ಪೋಸ್ಟರ್‍ ಸಹ ಹಾಕಿದ್ದು, ಫ್ಲೈಓವರ್ ಮೇಲೆ ಯುವತಿಯೊಬ್ಬಳು ನಿಂತಿದ್ದು, ಅಲ್ಲಿಂದ ಕೆಳಗೆ ಜಿಗಿಯುವುದಕ್ಕೆ ತಯಾರಿ ನಡೆಸಿದ್ದಾಳೆ. ಕೆಳಗೆ ಒಬ್ಬ ಪೊಲೀಸ್ ಅಧಿಕಾರಿ ಗನ್‍ ಹಿಡಿದು ನಿಂತಿದ್ದಾನೆ. ಹಿನ್ನೆಲೆಯಲ್ಲಿ ಕ್ರಿಕೆಟ್‍ ಸ್ಟೇಡಿಯಂ ಇದ್ದು, ಇಂದು RCB vs CSK ಪಂದ್ಯವಿದೆ ಎಂಬ ಬರಹವಿದೆ. ಈ ಪೋಸ್ಟರ್‍ ಈಗಾಗಲೇ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಭಾವಪ್ರೀತ ಪ್ರೊಡಕ್ಷನ್ಸ್ ಸಂಸ್ಥೆಯಡಿ ಈ ಚಿತ್ರವನ್ನು ವಿಜಯ್ ಎಂ. ರೆಡ್ಡಿ ನಿರ್ಮಿಸುತ್ತಿದ್ದಾರೆ.

Tags: