ಬೆಂಗಳೂರು: ಕೊಲೆ ಯತ್ನದ ಕೇಸ್‌ನಲ್ಲಿ ಜೋಡಿಹಕ್ಕಿ ಧಾರವಾಹಿ ಖ್ಯಾತಿಯ ನಟ ತಾಂಡವ್ ರಾಮ್‌ರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಿನಿಮಾ ನಿಂತಿದ್ದಕ್ಕೆ ಮುಗಿಲ್ ಪೇಟೆ ನಿರ್ದೇಶಕ ಭರತ್ ಮೇಲೆ ತಾಂಡವ್ ಗುಂಡು ಹಾರಿಸಿದ್ದರು. ಈ ಹಿನ್ನೆಲೆಯಲ್ಲಿ ತಾಂಡವ್‌ರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಗಿಲ್ ಪೇಟೆ ಸಿನಿಮಾದಲ್ಲಿ ತಾಂಡವ್ ರಾಮ್ ನಾಯಕ ನಟನಾಗಿ ನಟಿಸುತ್ತಿದ್ದರು. ಕಾರಣಾಂತರಗಳಿಂದ ಮುಗಿಲ್ ಪೇಟೆ ಸಿನಿಮಾದ ಶೂಟಿಂಗ್‌ನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಚೇರಿಯೊಂದರಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ನಿರ್ದೇಶಕ ಹಾಗೂ ತಾಂಡವ್ ರಾಮ್ ನಡುವೆ ಮಾತುಕತೆ ನಡೆಯುತ್ತಿತ್ತು. ಈ ವೇಳೆ ತಾಂಡವ್‌ಗೂ ಚಿತ್ರದ ನಿರ್ದೇಶಕ ಭರತ್‌ಗೂ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ತಾಂಡವ್ ಗನ್ ತೆಗೆದು ಭರತ್ ಮೇಲೆ ಗುಂಡು ಹಾರಿಸಿದ್ದಾರೆ.
ಅದೃಷ್ಟವಶಾತ್ ಗುಂಡು ಡೈರೆಕ್ಟರ್ ಭರತ್‌ಗೆ ತಗುಲದೇ ಗೋಡೆಗೆ ಬಿದ್ದಿದೆ. ಇದೀಗ ಭರತ್ ನೀಡಿದ ದೂರಿನ ಮೇರೆಗೆ ನಟ ತಾಂಡವ್‌ರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಹೆಚ್ಚಿನ ಸತ್ಯಾಸತ್ಯತೆ ಹೊರಬರಬೇಕಾಗಿದೆ.