Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಅಭಿಮಾನಿಗಳಿಂದಲೇ ಬೆಂಗಳೂರಿನಲ್ಲಿ ವಿಷ್ಣುವರ್ಧನ್‍ ಸ್ಮಾರಕ: ಸೆ.18ಕ್ಕೆ ಅಡಿಗಲ್ಲು

Vishnu vardhan

ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್‍ ಅವರ ಪುಣ್ಯಭೂಮಿ ನೆಲೆಸಮವಾಗಿ ಮುಂದೇನು ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬೆಂಗಳೂರಿನಲ್ಲೇ ಇನ್ನೊಂದು ಸ್ಮಾರಕ ಇನ್ನೊಂದು ವರ್ಷದಲ್ಲಿ ತಲೆ ಎತ್ತಲಿದ್ದು, ಅದಕ್ಕೂ ಮೊದಲು ಸೆ.18ರ ವಿಷ್ಣುವರ್ಧನ್‍ ಹುಟ್ಟುಹಬ್ಬದಂದು ಆ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುತ್ತದೆ.

ಅಲ್ಲಿಗೆ, ವಿಷ್ಣುವರ್ಧನ್‍ ಅವರ ಸ್ಮಾರಕಕ್ಕಾಗಿ ಮೈಸೂರಿನವರೆಗೂ ಹೋಗುವುದು ಕಷ್ಟ ಎನ್ನುತ್ತಿದ್ದವರಿಗೆ, ಸ್ಮಾರಕಕ್ಕಾಗಿ ಕೆಂಗೇರಿ ಬಳಿ ಅರ್ಧ ಎಕರೆ ಜಾಗ ಖರೀದಿ ಮಾಡಿದ್ದಾರೆ ನಟ-ನಿರ್ದೇಶಕ ಸುದೀಪ್‍. ಅಲ್ಲಿ 25 ಅಡಿಗಳ ದೊಡ್ಡ ಪ್ರತಿಮೆ ಜೊತೆಗೆ ಗ್ರಂಥಾಲಯ ಸಹ ಇರಲಿದೆಯಂತೆ. ವಿಶೇಷವೆಂದರೆ, ಇಡೀ ಭಾರತದಲ್ಲೇ ದೊಡ್ಡ ನಟರ ಅಭಿಮಾನಿಗಳು, ಯಾರದೇ ಸಹಾಯವಿಲ್ಲದೆ, ತಾವೇ ದುಡ್ಡು ಹಾಕಿ ನಿರ್ಮಾಣ ಮಾಡುತ್ತಿರುವ ಸ್ಮಾರಕ ಇದಾಗಲಿದೆ.

ಸೋಮವಾರ ರಾತ್ರಿ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‍, ‘ಸೆಪ್ಟೆಂಬರ್.2ರಂದು ಸುದೀಪ್ ಅವರ ಹುಟ್ಟುಹಬ್ಬ. ಅಂದೇ ವಿಷ್ಣುವರ್ಧನ್‍ ಅವರ ಸ್ಮಾರಕದ ಬ್ಲೂಪ್ರಿಂಟ್‍ ಅನ್ನು ಸುದೀಪ್‍ ಅನಾವರಣ ಮಾಡಲಿದ್ದಾರೆ. ಆ ನಂತರ ವಿಷ್ಣುವರ್ಧನ್‍ ಅವರ ಹುಟ್ಟುಹಬ್ಬದ ದಿನ, ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು’ ಎಂದರು.

ಈ ಸ್ಮಾರಕವು ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ ಅಥವಾ ಮೈಸೂರಿನಲ್ಲಿರುವ ವಿಷ್ಣುವರ್ಧನ್‍ ಅವರ ಸ್ಮಾರಕಕ್ಕೆ ಪರ್ಯಾಯವೂ ಅಲ್ಲ ಎನ್ನುವ ಅವರು, ‘ಇದು ಸ್ಮಾರಕ ಎನ್ನುವುದಕ್ಕಿಂತ ದರ್ಶನ ಕೇಂದ್ರ ಎನ್ನಬಹುದು. ಅದು ಅರ್ಥಪೂರ್ಣ ಕೆಲಸಕ್ಕೆ ವೇದಿಕೆಯಾಗಲಿದೆ’ ಎಂದರು.

ಡಾ. ವಿಷ್ಣು ಸೇನಾ ಸಮಿತಿಯು ಇದಕ್ಕೂ ಮೊದಲು ಡಾ.ವಿಷ್ಣುವರ್ಧನ್‍ ಅವರ 75ನೇ ಹುಟ್ಟುಹಬ್ಬವನ್ನು ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆಸುವುದಕ್ಕೆ ತೀರ್ಮಾನಿಸಿತ್ತು. ಈಗ ಆ ಕಾರ್ಯಕ್ರಮವನ್ನು ನಂದಿ ಲಿಂಕ್ಸ್ ಗ್ರೌಂಡ್‍ಗೆ ಸ್ಥಳಾಂತರಿಸಲಾಗಿದೆ. ಈ ಅಮೃತ ಮಹೋತ್ಸವದಲ್ಲಿ ಕನ್ನಡ ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಲಿದ್ದಾರೆ.

Tags:
error: Content is protected !!