ಕೆಲವು ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ, ‘ಅವನೇ ಶ್ರೀಮನ್ನಾರಯಣ’ನಾದರು. ಇದೀಗ ಪ್ರತಾಪ್ ಎಂಬ ಹೊಸ ಹೀರೋ, ‘ಇವನೇ ಶ್ರೀನಿವಾಸನಾಗುವುದಕ್ಕೆ ಹೊರಟಿದ್ದಾರೆ. ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಾಗಿದ್ದು, ಸೋಷಿಯಲ್ ಮೀಡಿಯಾದಿಂದ ಆಗುತ್ತಿರುವ ಸಮಸ್ಯೆಗಳ ಸುತ್ತ ಚಿತ್ರ ಸಾಗಲಿದೆ.
‘ಇವನೇ ಶ್ರೀನಿವಾಸ’ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಎಸ್. ಕುಮಾರ್. ಲಕ್ಷ್ಮಿ ನರಸಿಂಹಸ್ವಾಮಿ ಮೂವಿ ಮೇಕರ್ಸ್ ಹಾಗೂ ಎಲ್.ಎನ್.ಡಿ. ಕ್ರಿಯೇಶನ್ಸ್ ಮೂಲಕ ಪ್ರತಾಪ್ ಎನ್. ಹಾಗೂ ನವೀನ್ ಕುಮಾರ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪ್ರತಾಪ್, ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಮೊದಲಿಂದಲೂ ಅಭಿನಯ ಎಂದರೆ ಆಸಕ್ತಿ ಹೊಂದಿದ್ದ ಪ್ರತಾಪ್, ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಹೀರೋ ಆಗಿ ಅಭಿನಯಿಸಿದ್ದಾರೆ. ಈ ಚಿತ್ರದ ಟೀಸರನ್ನು ಶಿವರಾಜಕುಮಾರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಸೋಷಿಯಲ್ ಮೀಡಿಯಾದಿಂದ ಏನೇನೆಲ್ಲ ತೊಂದರೆ ಆಗುತ್ತಿದೆ ಎಂಬುದರ ಸುತ್ತ ಚಿತ್ರ ಸಾಗುತ್ತದೆ ಎನ್ನುವ ಕುಮಾರ್, ‘ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಪ್ರತಾಪ್‍ಗೆ ನಾಯಕಿಯಾಗಿ ಆದ್ಯಪ್ರಿಯಾ ನಟಿಸಿದ್ದಾರೆ. ರೋಹಿತ್ ಕುಮಾರ್ ಈ ಕಥೆ ಬರೆದಿದ್ದು, ನಾನು ಡೈಲಾಗ್ ರಚಿಸಿ ನಿರ್ದೇಶನ ಮಾಡಿದ್ದೇನೆ. ಪ್ರತಿದಿನ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ಕ್ರೈಮ್, ವಂಚನೆಯ ಬಗ್ಗೆ ‘ಇವನೇ ಶ್ರೀನಿವಾಸ’ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಮೋಹನ್ ಜುನೇಜಾ ಅವರು ನಟಿಸಿದ ಕೊನೆಯ ಚಿತ್ರವಿದು. ಚಿಲ್ಲರ್ ಮಂಜು, ಸುಶ್ಮಿತಾ ಮುಂತಾದವರು ನಟಿಸಿದ್ದಾರೆ’ ಎಂದರು.
ನಮ್ಮ ವೈಯಕ್ತಿಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಬಾರದು ಎನ್ನುವ ಕುಮಾರ್, ‘ಇದರಿಂದ ನಮ್ಮ ಮಾಹಿತಿ ತಿಳಿದುಕೊಳ್ಳುವ ವಂಚಕರು ಕಿರುಕುಳ, ತೊಂದರೆ ಕೊಡುತ್ತಾರೆ. ನಮ್ಮ ವೈಯಕ್ತಿಕ ವಿಚಾರ ನಮ್ಮಲ್ಲೇ ಇರಬೇಕು. ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂಬುದನ್ನು ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಜನವರಿ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎಂದರು.
ನಾಯಕ ಪ್ರತಾಪ್ ಮಾತನಾಡಿ, ‘ನಾನೊಬ್ಬ ಪೌರ ಕಾರ್ಮಿಕ. ಹಿಂದೆ ನಾಟಕಗಳಲ್ಲಿ ನಟಿಸುತ್ತಿದ್ದೆ. ಈ ಚಿತ್ರದ ನಾಯಕನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದಿದ್ದೇನೆ. ಶ್ರೀನಿವಾಸ ಯಾರು, ಎನ್ನುವುದೇ ಈ ಚಿತ್ರದ ಕಥೆ. ನಮ್ಮ ಸಿನಿಮಾದ ಮೂಲಕ ಸಮಾಜಕ್ಕೆ ಒಂದು ಸಂದೇಶ ನೀಡಬೇಕೆನ್ನುವುದು ನಮ್ಮ ಉದ್ದೇಶ’ ಎಂದರು.





