Mysore
25
scattered clouds
Light
Dark

‘ಫಾರೆಸ್ಟ್’ ಚಿತ್ರದಲ್ಲಿ 7 ಅಡಿ ಕಟೌಟ್‍; ಕನ್ನಡದಲ್ಲಿ ‘ದಿ ಗ್ರೇಟ್ ಕಲಿ ಆಫ್ ಜಮ್ಮು’ ನಟನೆ

ಆತನಿಗೆ ಜನ ಕೊಟ್ಟಿರುವ ಬಿರುದು ‘ದಿ ಗ್ರೇಟ್ ಕಲಿ ಆಫ್ ಜಮ್ಮು’ ಎಂದು. ಅದಕ್ಕೆ ಕಾರಣವೂ ಇದೆ. ಆತನ ಎತ್ತರ 7.6 ಅಡಿ. ಜನಪ್ರಿಯ WWF ಆಟಗಾರ ದಿ ಗ್ರೇಟ್‍ ಕಲಿ 7.1 ಅಡಿ ಎತ್ತರದವರಾದರೆ, ಈತ ಅವರಿಗಿಂತಲೂ ಎತ್ತರದವರು. ಈತನ ನಿಜ ನಾಮಧೇಯ ಸುನೀಲ್‍ ಕುಮಾರ್‍.

ಈಗ್ಯಾಕೆ ಸುನೀಲ್‍ ಕುಮಾರ್ ವಿಷಯ ಎಂದರೆ, ಈ ಸುನೀಲ್‍ ಕುಮಾರ್ ಇದೀಗ ಕನ್ನಡದ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಅದೇ ‘ಫಾರೆಸ್ಟ್’. ಈ ಚಿತ್ರದ ವಿಶೇಷ ಪಾತ್ರದಲ್ಲಿ ‘ದಿ ಗ್ರೇಟ್ ಕಲಿ ಆಫ್ ಜಮ್ಮು’ ಎಂದು ಕರೆಯಲ್ಪಡುವ ಸುನೀಲ್‍ ಕುಮಾರ್‍ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಆ ವಿಷಯವನ್ನು ಸ್ವತಃ ಚಿತ್ರತಂಡ ಘೋಷಿಸಿದೆ. ಅಷ್ಟೇ ಅಲ್ಲ, ಚಿತ್ರತಂಡದವರ ಜೊತೆಗೆ ಸುನೀಲ್‍ ಇರುವ ಒಂದು ಫೋಟೋ ಸಹ ಬಿಡುಗಡೆ ಮಾಡಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್, ಇದಕ್ಕೂ ಮುನ್ನ ಇತ್ತೀಚೆಗೆ ಬಿಡುಗಡೆ ಆಗಿರುವ ಹಿಂದಿಯ ‘ಸ್ತ್ರೀ 2’ ಚಿತ್ರದಲ್ಲಿ ಸರ್ಕಟ ಎಂಬ ಮುಖ್ಯ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ, ಯಶ್‍ ಅಭಿನಯದ ‘ಟಾಕ್ಸಿಕ್‍’ನಲ್ಲೂ ನಟಿಸುವ ಸಾಧ್ಯತೆ ಇದೆ.

ಇದೀಗ ಅವರು ‘ಫಾರೆಸ್ಟ್’ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌‌‌.‌ ಏಳು ದಿನಗಳ ಕಾಲ ಸಾಹಸ ನಿರ್ದೆಶಕ ರವಿವರ್ಮ ಅವರ ಸಾಹಾಸ ಸಂಯೋಜನೆಯಲ್ಲಿ ‘ಫಾರೆಸ್ಟ್’ನಲ್ಲೇ ನಡೆದ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಸುನೀಲ್ ಕುಮಾರ್ ಭಾಗವಹಿಸಿದ್ದರು.

ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ. ಕಾಂತರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಡಬಲ್ ಇಂಜಿನ್’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಚಂದ್ರಮೋಹನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಂದ್ರಮೋಹನ್ ಜೊತೆಗೆ ಸತ್ಯಶೌರ್ಯ ಸಾಗರ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದವರು ನಟಿಸಿದ್ದಾರೆ.

‘ಫಾರೆಸ್ಟ್’ ಎಂಬ ಹೆಸರೇ ಹೇಳುವಂತೆ ಕಾಡಿನಲ್ಲಿ ನಡೆಯುವ ಕಥೆ ಇದಾಗಿದ್ದು, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಕಾಡು ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.