ಗ್ರಾಫಿಕ್ಸ್ ಕೆಲಸಗಳು ವಿಳಂಬವಾಗುತ್ತಿರುವುದರಿಂದ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಜೊತೆಯಾಗಿ ನಟಿಸುತ್ತಿರುವ ‘45’ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಮಾಡುತ್ತಿರುವ MARZ ಸಂಸ್ಥೆಯವರೇ ಹೇಳಿಕೊಂಡಿದ್ದರು. ಹಾಗಾದರೆ, ಚಿತ್ರದ ಬಿಡುಗಡೆ ಯಾವಾಗ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಚಿತ್ರವನ್ನು ಡಿ. 25ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದೆ.
ಕೆಲವು ತಿಂಗಳ ಹಿಂದೆ ಚಿತ್ರತಂಡವು, ವಿಶೇಷ ಟೀಸರ್ ಮೂಲಕ ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ ಎಂಬ ವಿಷಯವನ್ನು ಹಂಚಿಕೊಂಡಿತ್ತು. ಕನ್ನಡದ ಮೂರು ಜನ ಹೆಸರಾಂತ ನಾಯಕನಟರ ಅಭಿಮಾನಿಗಳು ಈ ಸುದ್ದಿ ಕೇಳಿ ಸಂತಸಗೊಂಡು, ಚಿತ್ರ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದರು. ಆದರೆ, ಅಂದುಕೊಂಡಂತೆ ಚಿತ್ರ ಬಿಡುಗಡೆಯಾಗಲೇ ಇಲ್ಲ. ಅದಕ್ಕೆ ಕಾರಣ ಗ್ರಾಫಿಕ್ಸ್ ಕೆಲಸಗಳು.
ಕೆನಡಾದ ಪ್ರತಿಷ್ಠಿತ MARZ ಸಂಸ್ಥೆ ಈ ಚಿತ್ರಕ್ಕೆ VFX ಕೆಲಸ ಮಾಡುತ್ತಿದ್ದು, ಈ ಸಂಸ್ಥೆ VFX ಮಾಡುತ್ತಿರುವ ಮೊದಲ ಕನ್ನಡ ಚಿತ್ರವಿದು. ಈ ಚಿತ್ರಕ್ಕೆ ಹಾಲಿವುಡ್‍ನ ಖ್ಯಾತ ತಂತ್ರಜ್ಞರಿಂದ ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಶೇ. 40ರಷ್ಟು ಗ್ರಾಫಿಕ್ಸ್ ಕೆಲಸವಿದ್ದು, ಅದಿನ್ನೂ ಪೂರ್ತಿಯಾಗಿ ಮುಗಿಯದ ಹಿನ್ನೆಲೆಯಲ್ಲಿ ಚಿತ್ರವು ಅಂದುಕೊಂಡಂತೆ ಬಿಡುಗಡೆಯಾಗಿಲ್ಲ.
ಈ ಕುರಿತು ಮಾತನಾಡಿರುವ MARZ ಸಂಸ್ಥೆಯ ಮುಖ್ಯಸ್ಥ ಹಾಗೂ ತಂತ್ರಜ್ಞ ಯಶ್ ಗೌಡ, ‘ಗ್ರಾಫಿಕ್ಸ್ ಕೆಲಸಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆ ಮಾಡಲು ಆಗಲಿಲ್ಲ. ಸೆಪ್ಟೆಂಬರ್ 16ರ ಒಳಗೆ VFX ಕೆಲಸ ಮುಕ್ತಾಯವಾಗಲಿದೆ. ಆನಂತರ ಇನ್ನೊಂದು ತಿಂಗಳು ಕೆಲವು ಕೆಲಸಗಳಿರುತ್ತವೆ. ಅಕ್ಟೋಬರ್ 16ರ ಒಳಗೆ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತದೆ. ಚಿತ್ರ ಬಿಡುಗಡೆ ಸ್ವಲ್ಪ ತಡವಾದರೂ ಅತ್ಯುತ್ತಮ ತಂತ್ರಜ್ಞಾನದಿಂದ ಕೂಡಿರುವ ಚಿತ್ರವಾಗಿ ‘45’ ನಿಮ್ಮ ಮುಂದೆ ಬರಲಿದೆ’ ಎಂದು ಹೇಳಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಚಿತ್ರ ಕೈಗೆ ಸಿಕ್ಕ ನಂತರ ಪ್ರಚಾರ ಮಾಡಿ, ಡಿ. 25ರಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.





