ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರದ ಟೀಸರ್, ಎರಡು ವಾರಗಳ ಹಿಂದೆ ಯುಗಾದಿ ಹಬ್ಬದ ದಿನ ಬಿಡುಗಡೆಯಾಗಿತ್ತು. ಈ ಟೀಸರ್‍ಗೆ ಸಿಕ್ಕ ಪ್ರತಿಕ್ರಿಯೆಗೆ ಖುಷಿಯಾಗಿರುವ ಚಿತ್ರತಂಡ, ಬೇರೆ ರಾಜ್ಯಗಳ ಜನರಿಗೆ ಥ್ಯಾಂಕ್ಸ್ ಹೇಳುವುದರ ಜೊತೆಗೆ, ಚಿತ್ರದ ಪ್ರಚಾರ ಮಾಡಲು ಸಜ್ಜಾಗಿದೆ.
ಟೀಸರ್‌ಗೆ ದೊರಕಿರುವ ಮೆಚ್ಚುಗೆಗೆ ಖುಷಿಯಾಗಿರುವ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ, ಏಪ್ರಿಲ್ 15 ಹಾಗೂ 16 ಪಕ್ಕದ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸುವ ಮೂಲಕ ಎಲ್ಲಾ ರಾಜ್ಯಗಳ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಿದ್ದಾರೆ.
ಏಪ್ರಿಲ್ 15ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮುಂಬೈನ PVR Juhu ನಲ್ಲಿ ಪತ್ರಿಕಾಗೋಷ್ಠಿ ನಡೆಸುವ ಚಿತ್ರತಂಡ, ಅಂದು ಸಂಜೆ 7 ಗಂಟೆಗೆ ಹೈದರಾಬಾದ್‍ನ ಬಂಜಾರ ಹಿಲ್ಸ್ ನಲ್ಲಿರುವ PVR Cineplexನಲ್ಲಿ ಸುದ್ದಿಗೋಷ್ಠಿ ನಡೆಸಲಿದೆ. ಮರುದಿನ ಏಪ್ರಿಲ್ 16 ಬುಧವಾರ ಬೆಳಿಗ್ಗೆ 11 ಗಂಟೆಗೆ ಚೆನ್ನೈನ ಸತ್ಯಂ ಸಿನಿಮಾಸ್ ನಲ್ಲಿ ಹಾಗೂ ಅಂದು ಸಂಜೆ 7 ಗಂಟೆಗೆ ಕೇರಳದ ಕೊಚ್ಚಿ PVR Forumನಲ್ಲಿ ‘45’ ಚಿತ್ರದ ಪತ್ರಿಕಾಗೋಷ್ಠಿ ನಡೆಯಲಿದೆ.
ಈ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳ ಮೂಲಕ ಫಿಲಾಸಫಿ ಹೇಳುವ ಪ್ರಯತ್ನ ಮಾಡಲಾಗಿದೆಯಂತೆ. ಚಿತ್ರದಲ್ಲಿ ಶೇ. 40ರಷ್ಟು ಗ್ರಾಫಿಕ್ಸ್ ಇರಲಿದೆ. ಟೊರೊಂಟೋದ ಖ್ಯಾತ VFX ಸಂಸ್ಥೆಯಾದ MARZನಲ್ಲಿ ಗ್ರಾಫಿಕ್ಸ್ ಕೆಲಸ ನಡೆಯುತ್ತಿದ್ದು, ಆಗಸ್ಟ್ 15ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್ ರೆಡ್ಡಿ ನಿರ್ಮಾಣದ ‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ.





